ಬೆಂಗಳೂರು : ಸಚಿವ ಕೆ ಎನ್ ರಾಜಣ್ಣ ಹೇಳಿರುವಂತೆ ಮೂವರು ಡಿಸಿಎಂ ಬೇಡಿಕೆ ಸಂಬಂಧ ಮುಖ್ಯಮಂತ್ರಿಗಳೇ ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ ಎನ್ ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ. ಎಲ್ಲರ ಮನಸ್ಸಿಗೂ ಸಮಾಧಾನ. ನನ್ನನ್ನು ಡಿಸಿಎಂ ಆಗಿ ನೇಮಕ ಮಾಡಿರುವುದು ಮುಖ್ಯಮಂತ್ರಿಗಳು ಮತ್ತು ಗವರ್ನರ್. ಇದಕ್ಕೆಲ್ಲಾ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಸನಿಹದಲ್ಲಿ ಈ ತರಹದ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು, ಸಿಎಂರನ್ನು ಕೇಳಬೇಕು. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು. ನಾನು ತೆಲಂಗಾಣಕ್ಕೆ ಹೋಗಿದ್ದೆ. ಈ ಬಗ್ಗೆ ಪತ್ರಿಕೆಯಲ್ಲಿ ಸುದ್ದಿ ನೋಡಿದೆ ಎಂದು ತಿಳಿಸಿದರು.
ನಮ್ಮದು ಕಾಂಗ್ರೆಸ್ ಬಣ : ಕಾಂಗ್ರೆಸ್ನಲ್ಲಿನ ಬಣ ವಿಚಾರವಾಗಿ ಮಾತನಾಡಿ, ನಿಮ್ಮ ಹತ್ತಿರ ಬಣ ಇರಬಹುದು. ನಾನು ರಾಜಕೀಯ ಜೀವನದಲ್ಲಿ ಯಾವುದೇ ಬಣಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಾದರೆ ಎಸ್‌ಎಂ ಕೃಷ್ಣ ಕಾಲದಲ್ಲಿ, ಬಂಗಾರಪ್ಪ ಅವರ ಕಾಲದಲ್ಲೂ ನನಗೆ ಬಣ ಮಾಡುವ ಶಕ್ತಿ ಇತ್ತು. ಆದರೆ ನನಗೆ ಒಂದೇ ಒಂದು ಬಣ ಇರುವುದು, ಅದು ಕಾಂಗ್ರೆಸ್ ಬಣ ಎಂದು ಡಿಕೆಶಿ ಸ್ಪಷ್ಟಪಡಿಸಿದರು.