ಬೆಂಗಳೂರು: ಬಿಜೆಪಿ 10 ಶಾಸಕರನ್ನು ಅಮಾನತು ಮಾಡಿ ಸ್ವೀಕರ್ ಆದೇಶ ಹೊರಡಿಸಿದ್ದಾರೆ. ಇದೇ ವೇಳೆ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದ್ದಾರೆ. ಇದಕ್ಕೂ ಮೊದಲು, ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷ ಮುಂದಾಗಿತ್ತು.
ಅತ್ತ ಬಿಜೆಪಿ ಸದಸ್ಯರ ಅಮಾನತಿಗೆ ಆಡಳಿತ ಪಕ್ಷ ನಿಲುವಳಿ ಸೂಚನೆ ಮಂಡಿಸಿತ್ತು. ಸದ್ಯ 10 ಮಂದಿ ಬಿಜೆಪಿ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಅವಿಶ್ವಾಸ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿದ್ದರು. ಭೋಜನ ವಿರಾಮಕ್ಕೂ ಬಿಡದೇ ಕಲಾಪ ಮುಂದುವರಿಸಿದ ಸ್ಪೀಕರ್ ನಡೆಯನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಅವರ ವಿರುದ್ಧ ಅವಿಶ್ವಾಸ ನಿಲುವಳಿ ಸೂಚನೆ ಮಂಡನೆಗೆ ಮುಂದಾಗಿತ್ತು.
ಲಾಂಜ್ನಲ್ಲಿ ವಿಪಕ್ಷ ನಾಯಕರು ಸಭೆ ನಡೆಸಿ ಸ್ಪೀಕರ್ ವಿರುದ್ದ ನಿಲುವಳಿ ಸೂಚನೆ ಮಂಡಿಸಲು ತೀರ್ಮಾನ ಕೈಗೊಂಡಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆರ್ ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಿ, ನಿಲುವಳಿ ಸೂಚನೆ ಮಂಡಿಸಲು ರೆಡಿ ಆಗಿದ್ದರು.
ಆಡಳಿತ ಪಕ್ಷದಿಂದ ನಿಲುವಳಿ ಸೂಚನೆಗೆ ನಿರ್ಧಾರ: ಇತ್ತ ಬಿಲ್ ಪ್ರತಿ ಹರಿದು ಉಪಸಭಾಧ್ಯಕ್ಷರ ಮೇಲೆ ಬಿಸಾಕಿ ಪ್ರತಿಭಟನೆ ನಡೆಸಿದ ಬಿಜೆಪಿ ಸದಸ್ಯರ ವರ್ತನೆಯನ್ನು ಖಂಡಿಸಿರುವ ಆಡಳಿತ ಪಕ್ಷ, ಬಿಜೆಪಿ ಸದಸ್ಯರನ್ನು ಅಮಾನತು ಮಾಡುವಂತೆ ನಿಲುವಳಿ ಸೂಚನೆ ಮಂಡನೆಗೆ ನಿರ್ಧರಿಸಿತ್ತು. ಬಿಜೆಪಿ ಸದಸ್ಯರ ನಡೆಗೆ ತೀವ್ರ ಆಕ್ರೋಶ ಹೊರಹಾಕಿದ ಆಡಳಿತ ಪಕ್ಷ ಸದಸ್ಯರು ಸದನದಲ್ಲೇ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಪಕ್ಷಗಳ ಧರಣಿ ವಿರುದ್ಧ ಕಾಂಗ್ರೆಸ್ ಸದಸ್ಯರು ವಾಗ್ದಾಳಿ ನಡೆಸಿದರು.