ನಟನೆಯ ವ್ಯಾಮೋಹಕ್ಕೆ ಸಿಲುಕಿ ಕೈಯಲ್ಲಿ ಸ್ವಂತ ಕೆಲಸವಿದ್ರೂ ಕಲಾ ಸರಸ್ವತಿಯ ಆರಾಧನೆಗೆ ಬಣ್ಣದ ಲೋಕಕ್ಕೆ ಕಾಲಿಟ್ಟು ಚಿಕ್ಕ ಚಿಕ್ಕ ಪಾತ್ರಗಳಲ್ಲೇ ಖುಷಿಪಡುತ್ತಾ ಇಂದು ಸಾಕಷ್ಟು ಹೆಸರು ಗಳಿಸಿರುವ ನಟ ಗಣೇಶ್ ರಾವ್ ಕೇಸರ್ಕರ್. ತಮ್ಮ 20 ವರ್ಷಗಳ ಕಿರುತೆರೆ, ಹಿರಿತೆರೆ ಜರ್ನಿಯ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ.
* ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ..
ಮೂಲತಃ ಕೊಳ್ಳೆಗಾಲದವನು. ನಮ್ಮ ತಂದೆ ಮಿಲಿಟರಿ ಅಧಿಕಾರಿ. ನಾನು ಡಿಪ್ಲೋಮ ಇನ್ ಆಟೋಮೊಬೈಲ್ ಎಂಜಿನಿಯರಿಂಗ್ ಮುಗಿಸಿದ್ದೇನೆ. ಹೈಸ್ಕೂಲ್‍ನಲ್ಲಿದ್ದಾಗ ನಾಟಕವೊಂದಕ್ಕೆ ಬಣ್ಣ ಹಚ್ಚಿದ್ದೆ. ಅದರಲ್ಲಿ ನಾನು ಬಹುಮಾನ ಪಡೆದುಕೊಂಡಿದ್ದೆ. ಅಂದು ಆ ಸಂದರ್ಭ ನನಗೆ ಬಹಳ ಖುಷಿ ಕೊಡ್ತು. ನಾನು ಕಲಾವಿದನಾಗಬೇಕೆಂಬ ಆಸೆ ಮೊಳಕೆಯೊಡೆಯಿತು. ಆದರೆ ಮನೆಯಲ್ಲಿ ಮೊದಲಿನಿಂದಲೂ ಈ ಕ್ಷೇತ್ರದ ಬಗ್ಗೆ ಅಷ್ಟು ಆಸಕ್ತಿ ಇರಲಿಲ್ಲ. ಆದ್ದರಿಂದ ನಾನು ವಿದ್ಯಾಭ್ಯಾಸದ ನಂತರ ನಟನೆಯಲ್ಲಿ ತೊಡಗಿಕೊಳ್ಳೋಣ ಎಂದು ಓದಿನ ಕಡೆ ಗಮನ ಹರಿಸಿದೆ. ಇಂಜಿನಿಯರಿಂಗ್ ಮುಗಿದ ಬಳಿಕ ಕಲಾವಿದನಾಗಲು ನಿರ್ಧರಿಸಿದೆ.
ಕಿರುತೆರೆ ನಿಮ್ಮ ಕಲಾ ಬದುಕಿಗೆ ತಂದು ಕೊಟ್ಟ ಶ್ರೇಯಸ್ಸಿನ ಬಗ್ಗೆ ಹೇಳಿ..
ವಿದ್ಯಾಭ್ಯಾಸದ ಬಳಿಕ ಸ್ವಂತ ಕೆಲಸದಲ್ಲಿ ತೊಡಗಿದ ನನಗೆ ಚಿತ್ರರಂಗದ ಪರಿಚಯಸ್ಥರೊಬ್ಬರ ಮೂಲಕ ಕಿರುತೆರೆಯಲ್ಲಿ ನಟಿಸಲು ಅವಕಾಶ ದೊರೆಯಿತು. ನಾನು ಆರಡಿ ಎತ್ತರ ಅಷ್ಟೇ ಪರ್ಸನಾಲಿಟಿ ಇದ್ದಿದ್ದರಿಂದ ‘ಮಂಜುಕರಗಿತು’ ಧಾರಾವಾಹಿಯಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ದೊರೆಯಿತು. ಆ ಪಾತ್ರ ಕ್ಲಿಕ್ ಆಗಿ ಕಿರುತೆರೆಯಲ್ಲಿ ‘ಭಾಗ್ಯಚಕ್ರ’, ‘ಮನ್ವಂತರ’, ‘ಗೋಧೂಳಿ’, ‘ಪುಣ್ಯಕೋಟಿ’ ಹೀಗೆ ಬ್ಯಾಕ್ ಟು ಬ್ಯಾಕ್ ಸೀರಿಯಲ್ ಗಳಲ್ಲಿ ಅಭಿನಯಿಸಿದೆ. ಇದರ ಜೊತೆಗೆ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಸೈ ಎನಿಸಿಕೊಂಡೆ. ಕಲಾ ಸರಸ್ವತಿಯ ಆಶೀರ್ವಾದದಿಂದ ಇಂದು ಸುಮಾರು 4000ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ದೊರಕಿದೆ, ಈಗಲೂ ಅವಕಾಶ ಸಿಗುತ್ತಿದೆ.
ಬೆಳ್ಳಿತೆರೆಯಲ್ಲಿ ನಿಮ್ಮ ಪಯಣ ಶುರುವಾಗಿದ್ದು ಹೇಗೆ?
ಧಾರಾವಾಹಿಗಳಲ್ಲಿ ಒಂದಾದ ಮೇಲೆ ಒಂದರಂತೆ ನಟಿಸುತ್ತಾ ನನ್ನ ಪಾತ್ರಗಳ ಮೂಲಕ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. `ಚಾಮುಂಡಿ’ ಚಿತ್ರ ನಾನು ಮೊದಲು ನಟಿಸಿದ ಚಲನಚಿತ್ರ. ಅಲ್ಲಿಂದ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಸಿನಿಮಾದಲ್ಲಿ ನಟನೆ ಮಾಡುತ್ತಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡೆ. ಸುಮಾರು 200 ಸಿನಿಮಾಗಳಲ್ಲಿ ನಾನು ಪೋಷಕ ಪಾತ್ರಗಳಿಗೆ ಬಣ್ಣಹಚ್ಚಿದ್ದೇನೆ. ಈ ಮಧ್ಯೆ ನಾನು ನಮ್ಮವರು ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದೇನೆ. `ಸಚ್ಚಿ’, `ಡಾನ್’, `ಶಾಸ್ತ್ರಿ’, `ತಂಗಿಗಾಗಿ’, `ನಂದ’, ‘ರಾಕ್ಷಸ’, `ಪಾರ್ಥ’ ಹೀಗೆ ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸುತ್ತಾ ಹೋದೆ. ಅಂಬರೀಶ್, ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವಣ್ಣ ದರ್ಶನ್, ಸುದೀಪ್ ಸೇರಿದಂತೆ ಚಂದನವನದ ಎಲ್ಲಾ ಸ್ಟಾರ್ ನಟರು ಹಾಗೂ ಈಗಿನ ನವ ನಟರ ಜೊತೆಯೂ ನಟಿಸಿದ್ದೇನೆ