Breaking News

‘ನನ್ನ ಪತಿ ಸಾವಿಗೆ ನ್ಯಾಯ ಸಿಗಬೇಕು’: ಮೃತ ಹೆಡ್ ಕಾನ್ಸ್​ಟೇಬಲ್ ಪತ್ನಿ ನಿರ್ಮಲಾ ಆಗ್ರಹ

Spread the love

ಕಲಬುರಗಿ: ಅಕ್ರಮ ಮರಳು ಸಾಗಾಟ ತಡೆಯಲು‌ ಹೋಗಿದ್ದ ಹೆಡ್ ಕಾನ್ಸ್​ಟೇಬಲ್ ಸಾವು ಪ್ರಕರಣಕ್ಕೆ ಸಂಬಂಧ ಆರೋಪಿ ಟ್ರ್ಯಾಕ್ಟರ್ ಚಾಲಕನನ್ನು ಪೊಲೀಸರು ಬಂಧಿಸಿದ್ಧಾರೆ.

ಸಿದ್ದಣ್ಣ ಬಂಧಿತ ಆರೋಪಿ. ಗುರುವಾರ ಮಧ್ಯರಾತ್ರಿ ಹೆಡ್‌ ಕಾನ್ಸ್‌ಟೇಬಲ್ ಮೈಸೂರು ಅಲಿಯಾಸ್ ಮಯೂರ್ ಚವ್ಹಾಣ್ (51) ಅಕ್ರಮ ಮರಳು ಸಾಗಾಟದ ಟ್ರ್ಯಾಕ್ಟರ್ ಚಕ್ರದಡಿ ಸಿಲುಕಿ ಸಾವನ್ನಪ್ಪಿದ್ದರು. ಇದೊಂದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಮನೆ ಯಜಮಾನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಪತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಮೃತ ಮಯೂರ್ ಅವರ ಪತ್ನಿ ನಿರ್ಮಲಾ ಚವ್ಹಾಣ್​ ಆಗ್ರಹಿಸಿದ್ದಾರೆ.

ಪ್ರಕರಣದ ವಿವರ: ಅಫಜಲಪುರ ತಾಲೂಕಿನ ಚೌಡಾಪುರ ತಾಂಡಾ ನಿವಾಸಿ ಮಯೂರ್ ಚವ್ಹಾಣ್​ ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಪೊಲೀಸ್ ಠಾಣೆಯಲ್ಲಿ ಕಳೆದ 9 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ 11 ಗಂಟೆಗೆ ಊಟ ಮುಗಿಸಿಕೊಂಡು ನೈಟ್ ಡ್ಯೂಟಿ ಇದೆ ಅಂತಾ ಹೇಳಿ ಹುಲ್ಲೂರ್ ವೃತ್ತದ ನಾರಾಯಣಪುರ ಗ್ರಾಮದ ಬಳಿಯ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಪೆಟ್ರೋಲಿಂಗ್ ಹೋಗಿದ್ದರು. ಹೆಡ್‌ ಕಾನ್ಸ್‌ಟೇಬಲ್ ಮಯೂರ್ ಮತ್ತು ಕಾನ್ಸ್‌ಟೇಬಲ್ ಪ್ರಮೋದ್ ಬೈಕ್ ಮೇಲೆ ತೆರಳಿದ್ದರು.

ಕಲಬುರಗಿ ಜಿಲ್ಲಾದ್ಯಂತ ಭೀಮಾ ನದಿ ದಡದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸ್ಟಾಕ್ ಇದ್ದ ಮರಳನ್ನ ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ಮಾರಾಟ ಮಾಡಲು ಗುರುವಾರ ರಾತ್ರಿ ಟ್ರ್ಯಾಕ್ಟರ್​​ನಲ್ಲಿ ಸಿದ್ದಣ್ಣ ಎಂಬಾತ ತೆಗೆದುಕೊಂಡು ಹೋಗುತ್ತಿದ್ದ. ಆಗ ಪೆಟ್ರೋಲಿಂಗ್‌ ನಲ್ಲಿದ್ದ ಹೆಡ್‌ ಕಾನ್ಸ್‌ಟೇಬಲ್ ಮಯೂರ್ ಮತ್ತು ಮತ್ತೊರ್ವ ಕಾನ್ಸ್‌ಟೇಬಲ್ ಪ್ರಮೋದ್ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಮುಂದಾಗಿದ್ದರು.

ಟ್ರ್ಯಾಕ್ಟರ್ ಚೇಸ್​ ಮಾಡುವಾಗ ಒಮ್ಮೆಲ್ಲೆ ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣ ಬೈಕ್ ಮೇಲಿದ್ದ ಕಾನ್ಸ್‌ಟೇಬಲ್ ಮತ್ತು ಹೆಡ್‌ ಕಾನ್ಸ್‌ಟೇಬಲ್ ಮೇಲೆ ಹರಿಸಿದ್ದಾನೆ. ಈ ವೇಳೆ ಕೆಳಗೆ ಬಿದ್ದ ಇಬ್ಬರ ಪೈಕಿ ಹೆಡ್‌ ಕಾನ್ಸ್‌ಟೇಬಲ್ ಮಯೂರ್ ಮೇಲೆ ಟ್ರ್ಯಾಕ್ಟರ್ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಬಳಿಕ ಟ್ರಾಲಿ ಸ್ಥಳದಲ್ಲೇ ಬಿಟ್ಟು ಇಂಜಿನ್ ಸಮೇತ ಚಾಲಕ ಪರಾರಿಯಾಗಿದ್ದ. ಘಟನೆ ಸಂಬಂಧ ಸ್ಥಳಕ್ಕೆ ಎಸ್​ಪಿ ಇಶಾ ಪಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇಂಜಿನ್ ಸಮೇತ ಪರಾರಿಯಾಗಿದ್ದ ಟ್ರ್ಯಾಕ್ಟರ್ ಚಾಲಕ ಸಿದ್ದಣ್ಣನನ್ನ ಬಂಧಿಸಿದ್ದು, ಟ್ರ್ಯಾಕ್ಟರ್ ಮಾಲೀಕ ಸೈಬಣ್ಣ ಎಂಬಾತನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಮೃತ ಹೆಡ್ ಕಾನ್ಸ್​ಟೇಬಲ್ ಮಯೂರ್ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮ ಚೌಡಾಪುರ ತಾಂಡಾಗೆ ತಂದು ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಎಸ್​ಪಿ ಇಶಾ ಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮೃತ ಮಯೂರ್​ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಮೌನಾಚರಣೆ ಮಾಡಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ ಈ ಹಿಂದೆಯೂ ಅಕ್ರಮ ಮರಳು ಮಾಫಿಯಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಗಲಾಟೆಗಳನ್ನ ಮಾಡಿ ಅಟ್ಟಹಾಸ ಮೆರೆದಿದ್ದರು.


Spread the love

About Laxminews 24x7

Check Also

ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ…

Spread the love ಗರ್ಲಗುಂಜಿಯಲ್ಲಿ ಸರ್ವಲೋಕ ಸೇವಾ ಫೌಂಡೇಶನ್’ನಿಂದ ವೃಕ್ಷಾರೋಪಣ… ಪರಿಸರ ಜಾಗೃತಿಯ ಸಂದೇಶ ಖಾನಾಪೂರ ತಾಲೂಕಿನ ಗರ್ಲಗುಂಜಿ ಗ್ರಾಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ