ಲಕ್ನೋ: ಪೊಲೀಸ್ ಕಸ್ಟಡಿಯಲ್ಲಿರುವ ಉತ್ತರ ಪ್ರದೇಶದ ಕಾನ್ಪುರದ ಪೊಲೀಸ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ದುಬೆಯ ಮತ್ತಿಬ್ಬರು ಸಹಚರರನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ.
ಆರೋಪಿ ವಿಕಾಸ್ ದುಬೆಯ ಅನುಚರರಾದ ಪ್ರಭಾತ್ ಮಿಶ್ರಾ, ಭವನ್ ಶುಕ್ಲಾರನ್ನು ಇಂದು ಪೊಲೀಸರು ಕಾನ್ಪುರಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಮಾರ್ಗದ ನಡುವೆ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡಿದ್ದ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಶೂಟೌಟ್ ಮಾಡಿದ್ದ ಪರಿಣಾಮ ಆರೋಪಿಗಳು ಸಾವನ್ನಪ್ಪಿದ್ದಾರೆ ಎಂದು ಕಾನ್ಪೂರ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಘಟನೆಯಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದಾರೆ. ಆರೋಪಿಗಳನ್ನು ರಿಮಾಂಡ್ ಹೋಮ್‍ಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಉಳಿದಂತೆ ಬುಧವಾರ ನಡೆದಿದ್ದ ಎನ್‍ಕೌಂಟರ್ ನಲ್ಲಿ ದುಬೆ ಪ್ರಮುಖ ಸಹಚರ ಅಮರ್ ದುಬೆ ಅಲಿಯಾಸ್ ಶಾಡೋ ಸಾವನ್ನಪ್ಪಿದ್ದ. ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಅಮರ್ ದುಬೆ ಇದ್ದ ಮಾಹಿತಿ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿ ಆಧಾರಿಸಿ ಆತನನ್ನು ಬಂಧಿಸಲು ತೆರಳಿದ್ದ ವೇಳೆ ಘಟನೆ ನಡೆದಿತ್ತು. ಇತ್ತ ವಿಕಾಸ್ ಮಧ್ಯ ಪ್ರದೇಶದ ಉಜ್ಜೈನ್ ನಲ್ಲಿರುವ ಮಹಾಕಾಲ್ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು.ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ದುಬೆ ಬೆಂಬಲಿಗರು ಪೊಲೀಸರ ಬಳಿಯಿದ್ದ ಎಕೆ-47 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿದ್ದರು.