ಬೆಂಗಳೂರು, ಅ.12- ಆರೋಗ್ಯ ಇಲಾಖೆಯಂತಹ ಪ್ರಮುಖ ಜವಾಬ್ದಾರಿಯನ್ನು ನನ್ನ ಮೇಲೆ ವಿಶ್ವಾಸವಿಟ್ಟು ಸಿಎಂ ಹಾಗೂ ವರಿಷ್ಠರು ನೀಡಿದ್ದಾರೆ. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಅದನ್ನು ನಿಭಾಯಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಆದಿಚುಂಚನಗಿರಿ ಶಾಖಾಮಠಕ್ಕೆ ಇಂದು ಭೇಟಿ ನೀಡಿದ ಅವರು, ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಎಸ್.ಎಂ.ಕೃಷ್ಣ ಸರ್ಕಾರದ ವೇಳೆ ಸಂಪುಟದಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯನ್ನು ಪ್ರತ್ಯೇಕಿಸಲಾಗಿತ್ತು. ಆದರೆ, ಈಗ ಅವೆರಡೂ ಕೂಡ ಒಂದೇ ಸ್ವಾಮ್ಯದ ಇಲಾಖೆಗಳಾಗಿರುವುದರಿಂದ ಒಗ್ಗೂಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ.
ನನಗೆ ಜವಾಬ್ದಾರಿ ನೀಡಿರುವುದರಿಂದ ಪ್ರಪ್ರಥಮವಾಗಿ ರಾಜ್ಯದಲ್ಲಿ ಎದುರಾಗಿರುವ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವುದು ಮತ್ತು ಸಾವಿನ ಪ್ರಕರಣವನ್ನು ತಗ್ಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.