Breaking News

ಧ್ವನಿ ಎತ್ತಿದರೆ ಕಠಿಣ ಕ್ರಮ: ಅಕ್ಕಲಕೋಟೆ ಕನ್ನಡಿಗರಿಗೆ ಮಹಾರಾಷ್ಟ್ರ ಬೆದರಿಕೆ

Spread the love

ಕನ್ನಡಪರ ಘೋಷಣೆ ಕೂಗಿದ ಮಹಾರಾಷ್ಟ್ರದ ಅಕ್ಕಲಕೋಟೆ ತಾಲ್ಲೂಕಿನ 17 ಕನ್ನಡಿಗರಿಗೆ ನೋಟಿಸ್‌ ನೀಡಿರುವ ಸ್ಥಳೀಯ ಪೊಲೀಸರು, ಈ ನಡವಳಿಕೆ ಮುಂದುವರಿಸಿದರೆ ‘ರಾಜ್ಯ ದ್ರೋಹ’ ಆರೋಪ ಹೊರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

 

ಅಲ್ಲದೆ, ತಾಲ್ಲೂಕಿನ ಉಡಗಿ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಖಾಸಗಿ ಕನ್ನಡ ಶಾಲೆಯ ಸಿಬ್ಬಂದಿಯನ್ನು ಶಾಲಾಡಳಿತ ಅಮಾನತು ಮಾಡಿದೆ. ಜತ್ತ ತಾಲ್ಲೂಕಿನಲ್ಲಿ ಕನ್ನಡ ಸರ್ಕಾರಿ ಶಾಲೆಯೊಂದರ ಶಿಕ್ಷಕರೊಬ್ಬರಿಗೆ ನೋಟಿಸ್‌ ನೀಡಲಾಗಿದೆ.

ಡಿಸೆಂಬರ್‌ನಲ್ಲಿ ಗಡಿ ವಿವಾದ ಭುಗಿಲೇಳುತ್ತಿದ್ದಂತೆ ಸೊಲ್ಲಾಪುರ ಜಿಲ್ಲೆಯ ವಿವಿಧೆಡೆ ಕನ್ನಡ ಸಂಘಟನೆಗಳು ಕರ್ನಾಟಕವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದ್ದವು.‌ ಪ್ರತಿಭಟನೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್‌ ಅವರಿಗೆ ಪತ್ರ ಬರೆದಿರುವ ಮಹಾರಾಷ್ಟ್ರದ ಆದರ್ಶ ಕನ್ನಡ ಬಳಗ, ‘ಅಕ್ಕಲಕೋಟೆ, ಜತ್ತ‌ ಕನ್ನಡಿಗರ ಮೇಲೆ ಇಲ್ಲಿನ ಸರ್ಕಾರ ಕ್ರಮಕ್ಕೆ ಮುಂದಾಗಿರುವುದು ಈ ಭಾಗದಲ್ಲಿ ಭೀತಿ ಹುಟ್ಟಿಸಿದೆ. ಹೀಗಾಗಿ ಎರಡೂ ರಾಜ್ಯಗಳ (ಕರ್ನಾಟಕ- ಮಹಾರಾಷ್ಟ್ರ) ಮುಖ್ಯಮಂತ್ರಿಗಳ ಸಭೆ ಏರ್ಪಡಿಸಿ, ಅನ್ಯಾಯ ಆಗದಂತೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ಇತರರ ಮೇಲೆ ದಾಖಲಾಗಿರುವ ದೂರುಗಳನ್ನು ಹಿಂಪಡೆಯಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಮನವಿ ಮಾಡಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕನ್ನಡ ಸಾಹಿತ್ಯ ಪರಿಷತ್‌ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಸೋಮಶೇಖರ್ ಜಮಶೆಟ್ಟಿ, ‘ಅಕ್ಕಲಕೋಟೆಯ ಉಡಗಿ ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ಕರ್ನಾಟಕಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ 17 ಜನರ ಹೆಸರು ಮರಾಠಿ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಅವರಿಲ್ಲರಿಗೂ ನೋಟಿಸ್‌ ನೀಡಿರುವ ಪೊಲೀಸರು, ‘ಇಲ್ಲಿ ಯಾಕೆ ಕನ್ನಡ ಪರ ಘೋಷಣೆ ಕೂಗಿದ್ದೀರಿ, ಧ್ವಜ ಹಾರಿಸಿದ್ದೀರಿ. ಇದೇ ರೀತಿ ಮುಂದುವರಿದರೆ ರಾಜ್ಯ ದ್ರೋಹದ ಆರೋಪದಲ್ಲಿ ಎಫ್‌ಐಆರ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ’ ಎಂದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ