ತಿರುವನಂತಪುರಂ: ಕಳೆದ ವಾರ ಲಕ್ಕಿ ಡ್ರಾ ಮೂಲಕ 25 ಕೋಟಿ ಬಹುಮಾನ ಗೆದ್ದಿದ್ದ, ಆಟೋ ಚಾಲಕ ಕಂಗಾಲಾಗಿ ಹೋಗಿದ್ದಾನೆ. ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದ ಆಟೋ ಚಾಲಕ ಅನೂಪ್, ಮಲೇಷ್ಯಾಕ್ಕೆ ತೆರಳಿ ದುಡಿಯಲು ದಾರಿ ಕಂಡು ಕೊಂಡಿದ್ದ. ಇನ್ನೇನು ಮಲೇಷ್ಯಾಗೆ ತೆರಳಬೇಕು ಅನ್ನುವಷ್ಟರಲ್ಲಿ ಲಾಟರಿ ಗೆದ್ದಿರುವುದು ತಿಳಿದಿದೆ.
ಲಾಟರಿಯಲ್ಲಿ ಕೋಟಿ ಬಹುಮಾನ ಬಂದಿದೆ. ಇನ್ನು ಮುಂದೆ ನೆಮ್ಮದಿಯ ಬದುಕನ್ನು ಕಾಣಬಹುದು ಎಂದು ನಿರ್ಧರಿಸಿದ್ದರು. ಆದರೆ ಆಗಿದ್ದೇ ಬೇರೆ. ಬಹುಮಾನ ಬಂದಿರುವುದು ಗೊತ್ತಾಗುತ್ತಿದ್ದಂತೆ ಸ್ವಲ್ಪವೂ ನೆಮ್ಮದಿ ಇಲ್ಲದಂತಾಗಿದೆ ಎಂದಿದ್ದಾರೆ ಲಾಟರಿ ಬಹುಮಾನ ಗೆದ್ದುಕೊಂಡ ಅನೂಪ್ ದಂಪತಿ.
ದಂಪತಿಯ ನೆಮ್ಮದಿಗೆ ಭಂಗ ತಂದಿರುವುದು ನೆರೆಹೊರೆಯ ಮಂದಿ. 50 ರೂಪಾಯಿ ಕೊಟ್ಟು ಖರೀದಿಸಿದ್ದ ಟಿಕೆಟ್ನಿಂದ 25 ಕೋಟಿ ಮೊತ್ತ ಬಹುಮಾನ ಬಂದಿದೆ. ಆದಾಯ ಕಡಿತವಾಗಿ 15.7 ಕೋಟಿ ಮೊತ್ತ ಇವರ ಕೈಸೇರಲಿದೆ. ಈ ವಿಷಯ ತಿಳಿಯುತ್ತಿದ್ದಂತೆ, ನೆರೆಹೊರೆಯ ಎಲ್ಲರೂ ತಿರುವನಂತಪುರಂನಲ್ಲಿರುವ ಇವರ ಮನೆ ಮುಂದೆ ಜಮಾಯಿಸಿದ್ದಾರೆ.
ನಮಗೆ ಕಷ್ಟವಿದೆ, ಸಹಾಯ ಮಾಡಿ. ಸಾಲ ಕೊಡಿ ಎಂದು ಕೇಳುತ್ತಿದ್ದಾರೆ. ಜನರ ಈ ಬೇಡಿಕೆ ಅನೂಪ್ ದಂಪತಿಯನ್ನು ಚಿಂತೆಗೀಡು ಮಾಡಿದೆ. ಇದೀಗ ಅನೂಪ್ ಸಾಮಾಜಿಕ ಜಾಲತಾಣದ ‘ನನ್ನ ಬ್ಯಾಂಕ್ ಖಾತೆ ಕಾಲಿಯಾಗಿದೆ. ಬಹುಮಾನದ ಮೊತ್ತ ಇನ್ನೂ ನನ್ನ ಕೈಸೇರಿಲ್ಲ. ನಮಗೆ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ಎದುರಾಗಿದೆ. ಮಾಸ್ಕ್ ಧರಿಸಿಕೊಂಡು ಹೊರಹೋಗಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ನಮ್ಮ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ’ ಎಂದು ಮನವಿ ಮಾಡಿಕೊಂಡಿದ್ದಾರೆ.