ಬೆಳಗಾವಿ: ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ವಾಡಿಕೆಗಿಂತ ಸರಾಸರಿ ಶೇ 155ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ನೋವು-ನಲಿವು ಎರಡನ್ನೂ ನೀಡಿದೆ. ಬೇಸಿಗೆಯ ಸಂದರ್ಭದಲ್ಲಿ ತಂಪನ್ನೆರೆಯುವ ಜೊತೆಗೆ ನಷ್ಟವನ್ನೂ ಉಂಟು ಮಾಡಿದೆ.
ಗಡಿ ಜಿಲ್ಲೆಯಲ್ಲಿ ವಾಡಿಕೆಯಂತೆ ಸರಾಸರಿ 25.5 ಮಿ.ಮೀ. ಮಳೆಯಾಗಬೇಕಿತ್ತು.
ವಾಸ್ತವವಾಗಿ 64.9 ಮಿ.ಮೀ. ಮಳೆ ಸುರಿದಿದೆ. ಕೆಲವು ದಿನಗಳು ನಿತ್ಯ ಸಂಜೆ ಗುಡುಗು-ಸಿಡಿಸಲು ಸಹಿತ ವರುಣನ ಕೃಪೆಯಾಯಿತು. ಅಲ್ಲಲ್ಲಿ ಜೋರಾಗಿಯೇ ‘ಅಡ್ಡ ಮಳೆ’ಯಾಯಿತು. ಇದರಿಂದಾಗಿ ಬೇಸಿಗೆಯಲ್ಲೂ ಹಲವು ದಿನಗಳು ತಂಪಿನ ವಾತಾವರಣ ನಿರ್ಮಾಣವಾಗಿತ್ತು. ಮುಂಜಾನೆಗಳಲ್ಲಿ ಮಂಜು ಮುಸುಕಿದ ವಾತಾವರಣವೂ ಕಂಡುಬಂದಿತ್ತು;ಜನರಿಗೆ ಮುದವನ್ನೂ ನೀಡಿತ್ತು. ಅಲ್ಲಲ್ಲಿ ಆಲಿಕಲ್ಲುಸಹಿತ ಮಳೆಯಾಗಿದ್ದು ವರದಿಯಾಗಿದೆ.
ಮಳೆಯಿಂದಾಗಿ, ಮುಂಗಾರು ಹಂಗಾಮಿನಲ್ಲಿ ಕೃಷಿಗೆ ಜಮೀನು ಹದಗೊಳಿಸಲು ಮಳೆಯಿಂದ ನೆರವಾಯಿತು ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರ ಅಭಿಪ್ರಾಯವಾಗಿದೆ.
ಮಾರ್ಚ್ ನಂತರ ಚುರುಕು:
ಜನವರಿ, ಫ್ರೆಬ್ರುವರಿಯಲ್ಲಿ ಶೇ 100ರಷ್ಟು ಕೊರತೆ ಕಂಡುಬಂದಿತ್ತು. ಮಾರ್ಚ್‌ನಲ್ಲಿ ವಾಡಿಕೆಯಂತೆ 7 ಮಿ.ಮೀ. ಮಳೆಯಾಗಬೇಕಿತ್ತು. ವಾಸ್ತವವಾಗಿ 11.6 ಮಿ.ಮೀ. ಅಂದರೆ ಶೇ 66ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ ಚಿಕ್ಕೋಡಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 268, ಅಥಣಿ ತಾಲ್ಲೂಕಿನಲ್ಲಿ ಶೇ 260, ರಾಯಬಾಗ ತಾಲ್ಲೂಕಿನಲ್ಲಿ ಶೇ 245, ಕಾಗವಾಡ ತಾಲ್ಲೂಕಿನಲ್ಲಿ ಶೇ 221, ನಿಪ್ಪಾಣಿ ತಾಲ್ಲೂಕಿನಲ್ಲಿ ಶೇ 181, ಸವದತ್ತಿ ತಾಲ್ಲೂಕಿನಲ್ಲಿ 136, ಬೈಲಹೊಂಗಲ ತಾಲ್ಲೂಕಿನಲ್ಲಿ ಶೇ 112ರಷ್ಟು ಹೆಚ್ಚಾಗಿ ಮಳೆಯಾಗಿದೆ. ಯಾವ ತಾಲ್ಲೂಕಿನಲ್ಲೂ ಕೊರತೆ ಕಂಡುಬಂದಿಲ್ಲದಿರುವುದು ಮತ್ತು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಾಸ್ತಿ ಪ್ರಮಾಣದಲ್ಲಿಯೇ ಮಳೆಯಾಗಿರುವುದು ವಿಶೇಷವಾಗಿದೆ.
ವಿದ್ಯುತ್ ವ್ಯವಸ್ಥೆಗೆ ತೊಂದರೆ:
ಜೋರು ಗಾಳಿ-ಮಳೆಯಿಂದಾಗಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದು ನಷ್ಟ ಸಂಭವಿಸಿದೆ. ಹೆಸ್ಕಾಂ ಬೆಳಗಾವಿ ವೃತ್ತದ ವ್ಯಾಪ್ತಿಯಲ್ಲಿರುವ ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ರಾಮದುರ್ಗ ಹಾಗೂ ಘಟಪ್ರಭಾ ಭಾಗದಲ್ಲಿ 894 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 544 ವಿದ್ಯುತ್ ಕಂಬಗಳನ್ನು ಬದಲಿಸಲಾಗಿದೆ. 134 ವಿದ್ಯುತ್ ಪರಿವರ್ತಕಗಳು (11 ಕೆ.ವಿ. ಸಾಮರ್ಥ್ಯದವು) ಹಾನಿಗೊಳಗಾಗಿದ್ದವು. ಅವುಗಳನ್ನು ದುರಸ್ತಿಪಡಿಸಲಾಗಿದೆ. 7.94 ಕಿ.ಮೀ.ನಷ್ಟು ವಿದ್ಯುತ್ ಮಾರ್ಗಕ್ಕೆ ತೊಂದರೆಯಾಗಿತ್ತು. ಒಟ್ಟು ₹2.95 ಕೋಟಿ ನಷ್ಟ ಸಂಭವಿಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.