Breaking News
Home / ರಾಜಕೀಯ / ಎಂಎಲ್‌ಸಿ ಟಿಕೆಟ್ ರೇಸ್‌ನಲ್ಲಿ ಸೊಸೆ, ಮೊಮ್ಮಗ: ನನಗೆ ಕೆಟ್ಟ ಹೆಸರು ತರಬೇಡಿ ಎಂದ ದೇವೇಗೌಡ

ಎಂಎಲ್‌ಸಿ ಟಿಕೆಟ್ ರೇಸ್‌ನಲ್ಲಿ ಸೊಸೆ, ಮೊಮ್ಮಗ: ನನಗೆ ಕೆಟ್ಟ ಹೆಸರು ತರಬೇಡಿ ಎಂದ ದೇವೇಗೌಡ

Spread the love

ಹಾಸನ, ನವೆಂಬರ್ 12: ರಾಜ್ಯದಲ್ಲಿ ವಿಧಾನ ಪರಿಷತ್​​ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಯೂ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಹಾಸನ ಜಿಲ್ಲೆಯ ರಾಜಕೀಯ ಭದ್ರಕೋಟೆಯಾಗಿರುವ ಪ್ರಮುಖ ಪ್ರಾದೇಶಿಕ ಪಕ್ಷ ಎಂದರೆ ಜೆಡಿಎಸ್.

ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಇಲ್ಲಿ ಪ್ರಾಬಲ್ಯ ಹೊಂದಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಕೇವಲ ಮೂರು ಸಾವಿರದ ಐದುನೂರಷ್ಟು ಮಾತ್ರ ಮತದಾರರಿದ್ದು, ಈ ಮತದಾರರನ್ನು ಸೆಳೆಯಲು ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.

ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಇಂದು ಹಾಸನದಲ್ಲಿ ಸಭೆ ನಡೆಯಿತು. ಮೇಲ್ಮನೆಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗೂ ಭವಾನಿ ರೇವಣ್ಣನವರ ಪುತ್ರ ಸೂರಜ್ ರೇವಣ್ಣಗೆ ಈ ಬಾರಿ ಟಿಕೆಟ್ ಗ್ಯಾರಂಟಿ ಎಂಬ ಮಾತುಗಳು ಹರಿದಾಡುತ್ತಿದ್ದು, ಇಂದಿನ ದೇವೇಗೌಡರ ಸಭೆಯಲ್ಲಿಯೂ ದೇವೇಗೌಡರು ಕೂಡಾ ಹರಿದಾಡುತ್ತಿರುವ ಮಾತುಗಳು ನಿಜ ಎಂದು ಸ್ಪಷ್ಪಪಡಿಸಿದ್ದಾರೆ.

ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು
 “ವಿಧಾನ ಪರಿಷತ್​​ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ,” ಎಂದು ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಹೇಳಿದ್ದಾರೆ.

ಜನವರಿಯಲ್ಲಿ ತೆರವಾಗುತ್ತಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ಘೋಷಣೆ ಹಿನ್ನೆಲೆ ಹಾಸನ ಲೋಕಸಭಾ ಸಂಸದ ಪ್ರಜ್ವಲ್​​ ರೇವಣ್ಣರವರ ಅಧಿಕೃತ ನಿವಾಸದಲ್ಲಿ ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಸಭೆಯನ್ನು ಮಾಜಿ ಪ್ರಧಾನಿ ದೇವೇಗೌಡರು ನಡೆಸಿದರು.

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆಯಲ್ಲಿ ಎಚ್.ಡಿ. ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಶಾಸಕರಾದ ಎಚ್.ಡಿ. ರೇವಣ್ಣ, ಕೆ.ಎಸ್. ಲಿಂಗೇಶ್, ಮಾಜಿ ಶಾಸಕರು, ಜಿ.ಪಂ. ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಯಿತು. ಟಿಕೆಟ್‌ಗಾಗಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ ಹೆಸರು ಹಾಗೂ ರೇವಣ್ಣ ಪತ್ನಿ ಭವಾನಿ ರೇವಣ್ಣ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ.

ಪಕ್ಷಕ್ಕೆ ದುಡಿದ ನೂರಾರು ಕಾರ್ಯಕರ್ತರಿದ್ದಾರೆ

ಹಾಸನದ ಜೆಡಿಎಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಎಚ್.ಡಿ. ದೇವೇಗೌಡ, “ಹಾಸನ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಹೋಗಿ ಚುನಾಯಿತ ಸದಸ್ಯರೊಂದಿಗೆ ಸಭೆ ಮಾಡುತ್ತೇನೆ. ಜಿ.ಪಂ., ತಾ.ಪಂ.‌ ಮಾಜಿ ಸದಸ್ಯರ ಜೊತೆಯೂ ಚರ್ಚಿಸುತ್ತೇನೆ. ಅನಂತರ ಅಭ್ಯರ್ಥಿ ಯಾರೆಂದು ತೀರ್ಮಾನ ತೆಗೆದುಕೊಳ್ಳುತ್ತೇನೆ. ಇಂದಿನ ಸಭೆಯಲ್ಲಿ ಕೆಲವರು ಭವಾನಿ ರೇವಣ್ಣ, ಸೂರಜ್ ಹೆಸರು ಹೇಳಿದ್ದಾರೆ,” ಎಂದರು.

“ಅಂತಿಮವಾಗಿ ನಮಗೆ ಯಾವುದೇ ಕೆಟ್ಟ ಹೆಸರು ಬರಬಾರದು. ಪಕ್ಷಕ್ಕೆ ದುಡಿದ ನೂರಾರು ಕಾರ್ಯಕರ್ತರಿದ್ದಾರೆ. ನಮ್ಮ ಮನೆಯಲ್ಲಿ ಯಾರನ್ನೂ ನಿಲ್ಲಿಸಲು ತೀರ್ಮಾನ ಮಾಡಿಲ್ಲ. ಯಾವುದೇ ಮನೆತನಕ್ಕೆ ಜೆಡಿಎಸ್ ಸೀಮಿತವಾದ ಪಕ್ಷವಲ್ಲ,” ಎಂದು ಸ್ಪಷ್ಟಪಡಿಸಿದರು.

ಮುಂದೆ ಅವರೇ ನಮ್ಮನೆ ಬಾಗಿಲಿಗೆ ಬರುತ್ತಾರೆ

ಜೆಡಿಎಸ್ ಪಕ್ಷದಿಂದದ ಬೆಳೆದ ಮುಖಂಡರು ಈಗ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಇದ್ದಾರೆ. ಅವರು 2023ಕ್ಕೆ ಜೆಡಿಎಸ್ ಇರಲ್ಲ ಅಂಥಾ ಹೇಳುತ್ತಿದ್ದಾರೆ. 2023ಕ್ಕೆ ಯಾರು ಪಕ್ಷ ತೆಗಿಯುತ್ತೇನೆ ಅಂಥಾ ಹೇಳುತ್ತಾರೋ ಅವರೇ ನಮ್ಮ ಮನೆ ಬಾಗಿಲಿಗೆ ಬರಬಹುದು. ನಾನು ಉತ್ಪ್ರೇಕ್ಷೆಯಿಂದ ಹೇಳುತ್ತಿಲ್ಲ ಹಾಗೇ ಹೇಳುವವರೇ ಜೆಡಿಎಸ್ ಮನೆ ಬಾಗಿಲಿಗೆ ಬರಬಹುದು ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ನಮ್ಮ ಕುಟುಂಬಕ್ಕೇ ಟಿಕೆಟ್​ ಕೊಡಬೇಕೆಂದು ಹೇಳಿಲ್ಲ

ಅಭಿಪ್ರಾಯ ಸಂಗ್ರಹ ಸಭೆಗೂ ಮುನ್ನ ವಿಧಾನ ಪರಿಷತ್ ಚುನಾವಣೆಗೆ ಸೋದರ ಸೂರಜ್ ರೇವಣ್ಣ, ತಾಯಿ ಭವಾನಿ ರೇವಣ್ಣ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆ ಅರಸೀಕೆರೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಈ‌ ಬಗ್ಗೆ ಇನ್ನೂ‌ ಚರ್ಚೆ ನಡೆದಿಲ್ಲ. ಜೆಡಿಎಸ್ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದು ಅಂತಿಮವಾಗಿರುತ್ತದೆ. ನಮ್ಮ ಕುಟುಂಬಕ್ಕೆ ಕೊಡಬೇಕೆಂದು ಎಲ್ಲೂ ಹೇಳಿಲ್ಲ, ಎಲ್ಲೂ ಕೇಳಿಲ್ಲ. ಇಂದು ಚರ್ಚೆ ನಡೆಯುತ್ತದೆ, ಅದರ ಮೇಲೆ ತೀರ್ಮಾನ ಆಗುತ್ತೆ ಎಂದು ತಿಳಿಸಿದ್ದರು.

ಅವೆಲ್ಲಾ ಕೇವಲ ಊಹಾಪೋಹಗಳು

ಇನ್ನು ವಿಧಾನ ಪರಿಷತ್ ಚುನಾವಣೆಗೆ ಸೂರಜ್ ರೇವಣ್ಣ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, ದೇವೇಗೌಡರು, ಶಾಸಕರು, ಮುಖಂಡರು, ಕಾರ್ಯಕರ್ತರ ಜೊತೆ ಸಭೆ ಬಳಿಕ ಇದಾದ ಬಳಿಕ, ತಾಲ್ಲೂಕುಗಳಲ್ಲಿ ಸಭೆ ನಡೆಸುತ್ತೇವೆ. ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಸೂರಜ್‌ಗೆ ಟಿಕೆಟ್​ ಪಕ್ಕಾ ಅನ್ನೋದೆಲ್ಲಾ ಕೇವಲ ಊಹಾಪೋಹಗಳು. ಎಲ್ಲಾ ಶಾಸಕರು ಕುಳಿತು ಚರ್ಚಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ