Breaking News

ಖಾಸಗಿ, ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಶೇಕಡ 75ರಷ್ಟ ಕನ್ನಡಿಗರಿಗೆ: ಬೊಮ್ಮಾಯಿ

Spread the love

ಬೆಂಗಳೂರು: ಖಾಸಗಿ, ಸರ್ಕಾರಿ ಮತ್ತು ಅರೆ ಸರ್ಕಾರಿ ಕ್ಷೇತ್ರಗಳಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಶೇಕಡ 75ರಷ್ಟನ್ನು ಕನ್ನಡಿಗರಿಗೆ ಸಿಗುವಂತೆ ಮಾಡುವ ಮೂಲಕ ಕನ್ನಡಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 66ನೇ ಕರ್ನಾಟಕ ರಾಜ್ಯೋತ್ಸವದ ರಾಜ್ಯಮಟ್ಟದ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ರಾಜ್ಯ ಔದ್ಯೋಗಿಕ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುವುದು. ಅದರ ಮೂಲಕ ಕೌಶಲ ಮತ್ತು ಅರೆ ಕೌಶಲ ವಿಭಾಗಕ್ಕೆ ಸೇರಿದ ಶೇಕಡ 75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಕನ್ನಡವನ್ನು ಎಲ್ಲ ಆಯಾಮಗಳಲ್ಲೂ ಬಳಕೆಗೆ ತರುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕಿದೆ. ಅದಕ್ಕೆ ಪೂರಕವಾಗಿ ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವನ್ನು ತಮ್ಮ ಸರ್ಕಾರ ಆರಂಭಿಸಿದೆ. ಈ ವಿಚಾರದಲ್ಲಿ ಗಟ್ಟಿಯಾದ ನಿಲುವನ್ನು ಸರ್ಕಾರ ಹೊಂದಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾಥಮಿಕ ಶಿಕ್ಷಣ
ದಿಂದ ಸ್ನಾತಕೋತ್ತರ ಪದವಿಯವರೆಗೆ ಎಲ್ಲ ಹಂತದಲ್ಲೂ ಕನ್ನಡಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಕನ್ನಡದ ಮಕ್ಕಳಿಗೆ ಉದ್ಯೋಗದ ಭರವಸೆಯನ್ನು ನೀಡಬೇಕಿದೆ. ಆಗ ಮಾತ್ರ ಕನ್ನಡ, ಕನ್ನಡಿಗರ ಶಕ್ತಿ ಹೆಚ್ಚುತ್ತದೆ. ಅದಕ್ಕಾಗಿ ಕೈಗಾರಿಕಾ ತರಬೇತಿ ಕೇಂದ್ರಗಳು, ಪಾಲಿಟೆಕ್ನಿಕ್ ಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಆರಂಭವಾಗುವ ಉದ್ದಿಮೆಗಳಲ್ಲಿ ಕೌಶಲ ವಲಯದ ಶೇಕಡ 75ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಆಡಳಿತದಲ್ಲಿ ಕನ್ನಡ ಬಳಕೆ ಹೆಚ್ಚಿಸಲು ಅಗತ್ಯವಿರುವ ಎಲ್ಲ ಕೆಲಸವನ್ನೂ ಮಾಡಲಾಗುವುದು. ಚಿಂತನೆ, ಯೋಜನೆ, ಅನುಷ್ಠಾನ ಎಲ್ಲವೂ ಕನ್ನಡದಲ್ಲೇ ನಡೆಯುವಂತೆ ಮಾಡುವುದು ತಮ್ಮ ಗುರಿ ಎಂದರು.

ವಿಶೇಷ ಅನುದಾನ:ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು‌. ಅದಕ್ಕಾಗಿ ಕಲ್ಯಾಣ ಕರ್ನಾಟಕಕ್ಕೆ ಮುಂದಿನ ಬಜೆಟ್ ನಲ್ಲಿ ₹3000 ಕೋಟಿ ವಿಶೇಷ ಅನುದಾನ ಒದಗಿಸಲಾಗುವುದು. ಕಿತ್ತೂರು ಕರ್ನಾಟಕದ ಅಭಿವೃದ್ಧಿ ಹಾಗೂ ಮೈಸೂರು ಕರ್ನಾಟಕದಲ್ಲಿ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಅನುದಾನ ಒದಗಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಹಿಂದಿ ಹೇರಿಕೆ ವಿರೋಧಿಸಿದ ಶಾಸಕ ರಿಜ್ವಾನ್

ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಕನ್ನಡಿಗರ ಮೇಲೆ ಹೇರುವುದಕ್ಕೆ ತಮ್ಮ ವಿರೋಧವಿದೆ ಎಂದು ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.

ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ವೇದಿಕೆಯಲ್ಲೇ ತಮ್ಮ ವಿರೋಧವನ್ನು ಪ್ರಕಟಿಸಿದರು.

ದೇಶದಲ್ಲಿ ಶೇಕಡ 34ರಷ್ಟು ಜನರು ಮಾತ್ರ ಮಾತೃಭಾಷೆಯಾಗಿ ಹಿಂದಿಯನ್ನು ಬಳಸುತ್ತಾರೆ. ಉಳಿದ ಶೇ 66ರಷ್ಟು ಜನರ ಮೇಲೆ ಹಿಂದಿ ಭಾಷೆಯನ್ನು ಹೇರುವುದು ಪ್ರಜಾಪ್ರಭುತ್ವದ ವಿರೋಧಿ ಎಂದು ಹೇಳಿದರು.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಗಟ್ಟಿಯಾದ ನಿಲುವು ತಾಳುವುದು ಅಗತ್ಯ ಎಂದರು.

ಗ್ರಾಮ ಪಂಚಾಯಿತಿಗೊಂದು ಶಾಲಾ ಸಂಕೀರ್ಣ:

ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಸುಸಜ್ಜಿತವಾದ ಶಾಲಾ ಸಂಕೀರ್ಣ ನಿರ್ಮಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಎಲ್ಲ ಮೂಲಸೌಕರ್ಯ ಇರುವ ಶಾಲಾ ಸಂಕೀರ್ಣ ನಿರ್ಮಿಸಲಾಗುವುದು’ ಎಂದರು.

ರಾಜ್ಯದ 22,718 ಕಿರಿಯ ಪ್ರಾಥಮಿಕ ಶಾಲೆಗಳ ಪೈಕಿ 14,230 ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಮಕ್ಕಳ ದಾಖಲಾತಿ ಇದೆ. 22,710 ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 2,421 ಶಾಲೆಗಳಲ್ಲಿ 35ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿದ್ದಾರೆ‌. ಸರ್ಕಾರಿ ಶಾಲೆಗಳು ಮತ್ತು ಕನ್ನಡ ಕಲಿಕೆ ಕುರಿತು ಮಕ್ಕಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ