ವಿಜಯಪುರ: ಸಿಂದಗಿ, ಹಾನಗಲ್ ಮತದಾರರು ಮತ ಹಾಕುವ ಮುನ್ನ ಗ್ಯಾಸ್ ಸಿಲಿಂಡರ್, ಬೈಕ್, ಕಾರು, ಆಟೋ, ಟ್ರಾಕ್ಟರ್‌ಗೆ ನಮಸ್ಕರಿಸಿ ಮತ ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.
ಸಿಂದಗಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್‌ಗೆ ನಮಸ್ಕರಿಸಿ ಹೋಗಿ ಮತದಾನ ಮಾಡಿ ಎಂದಿದ್ದರು. ಈಗ ನಾನು ಅದನ್ನು ಮತದಾರರಿಗೆ ನೆನಪಿಸಲು ಬಯಸುತ್ತೇನೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ರಸಗೊಬ್ಬರ ಅಭಾವವಿದ್ದು, ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ ಸರ್ಕಾರ ರೈತರ ಪರಿಸ್ಥಿತಿ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಳಿಕ ನಡೆದ ಮಾದಿಗ/ದಂಡೋರಾ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇವಲ ಉಪ ಚುನಾವಣೆಯಲ್ಲ. ಇದು ಸುಳ್ಳು ಹಾಗೂ ಸತ್ಯದ ನಡುವಿನ ಯುದ್ಧ. ಬಿಜೆಪಿಯವರು ಸುಳ್ಳಿನ ಮೇಲೆ ಮನೆ ಕಟ್ಟಲು ಹೊರಟಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ ಎಂದರು.
ನಾವು ವಿವಿಧ ಸಮಾಜದ ಮುಖಂಡರ ಸಭೆ ಮಾಡಿ ನಿಮ್ಮ ಜತೆ ಇದ್ದೇವೆ ಎಂದು ಧೈರ್ಯ ತುಂಬುತ್ತಿದ್ದೇವೆಯೇ ಹೊರತು, ವಿಭಜನೆ ಮಾಡುತ್ತಿಲ್ಲ. ನಾವು ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಸೇರಿದಂತೆ ಎಲ್ಲ ಜಾತಿಗಳಿಗೆ ಜನಗಣತಿ ಆಧಾರದ ಮೇಲೆ ಅನುದಾನ ನೀಡಬೇಕು ಎಂಬ ಕಾನೂನು ದೇಶದಲ್ಲಿ ತಂದಿದ್ದರೆ ಅದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಎಂದರು.
ಬಿಜೆಪಿ ಶಕ್ತಿ ನೋಟಿನಲ್ಲಿ: ಬಿಜೆಪಿ ಶಕ್ತಿ ಕೇವಲ ನೋಟಿನಲ್ಲಿದೆ. ನಿಮ್ಮನ್ನು ಖರೀದಿಸಲು ಮುಂದಾಗುತ್ತಾರೆ. ಅವರು ಉತ್ತಮ ಆಡಳಿತ ನೀಡಿಲ್ಲ. ಬಡವರು, ರೈತರಿಗೆ ನೆರವು ನೀಡಿಲ್ಲ. ಸಿಂದಗಿ ಕ್ಷೇತ್ರದ ಜನತೆ ಪ್ರಜ್ಞಾವಂತ, ಬುದ್ಧಿವಂತರಿದ್ದೀರಿ. ನೀವು ನಿಮ್ಮ ಸ್ವಾಭಿಮಾನದ ಮತವನ್ನು ಹಣಕ್ಕೆ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.
ಶಿವಕುಮಾರ್ ಸಭೆ ಮೊಟಕು: ಡಿ.ಕೆ.ಶಿವಕುಮಾರ್ ಅವರ ಮಾವ ಮೈಸೂರಿನ ಶ್ರೀ ರಾಜ ಸೋಪ್ ನೆಟ್ ಕಾರ್ಖಾನೆ ಮಾಲೀಕರಾದ ಆರ್. ತಿಮ್ಮಯ್ಯ ವಿಧಿವಶರಾದ ಸುದ್ದಿ ತಿಳಿಯುತ್ತಿದ್ದಂತೆ ಸಿಂದಗಿ ಹಾಗೂ ಹಾನಗಲ್‌ನಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಬೇಕಾಗಿದ್ದ ಚುನಾವಣಾ ಸಭೆಗಳನ್ನು ಮೊಟಕುಗೊಳಿಸಿ ಮೈಸೂರಿಗೆ ತೆರಳಿದರು.
Laxmi News 24×7