ಬೆಂಗಳೂರು: ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಕೇಸ್ನಲ್ಲಿ ಅತೀದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ಡ್ರಗ್ಸ್ ಪೆಡ್ಲರ್ಗಳನ್ನ ಮತ್ತು ಡೀಲರ್ಗಳನ್ನ ಮಾತ್ರ ಬಂಧಿಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಇದೀಗ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಫ್ಯಾಕ್ಟರಿಯನ್ನ ಪತ್ತೆ ಮಾಡಿದ್ದಾರೆ.
ವಿದೇಶಗಳಿಗೂ ಮಾರಾಟ..!
ನಂಬಲು ಸಾಧ್ಯವಾಗದಿದ್ದರೂ ಇದು ಸತ್ಯವಾಗಿದೆ. ಇದುವರೆಗೆ ವಿದೇಶದಲ್ಲಿ ತಯಾರಾಗ್ತಿದ್ದ ಡ್ರಗ್ಸ್ ಬೆಂಗಳೂರಿನಲ್ಲೇ ತಯಾರಾಗುತ್ತಿದೆ ಅನ್ನೋದು ಬಯಲಾಗಿದೆ. ನಗರದ ಮನೆಯೊಂದರಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡುತ್ತಿದ್ದರು. ಐದು ಮಾದರಿಯ ವಿವಿಧ ಕೆಮಿಕಲ್ ಬಳಸಿ ಡ್ರಗ್ಸ್ ತಯಾರು ಮಾಡಲಾಗುತ್ತಿತ್ತು. ಡ್ರಗ್ಸ್ ತಯಾರು ಮಾಡಿ ಬೆಂಗಳೂರು ಸೇರಿದಂತೆ ಬೇರೆ ಬೇರೆ ರಾಜ್ಯ ಹಾಗೂ ಬೇರೆ ದೇಶಕ್ಕೂ ಸಾಗಾಟ ಮಾಡಲಾಗುತ್ತಿತ್ತು.
ಬಂಧಿತ ಆರೋಪಿ ಜಾನ್
ಸಿಂಥೆಟಿಕ್ ಡ್ರಗ್ಸ್ನ ಹೈ-ಹ್ಯಾಂಡ್ ಮಾದರಿ ತಯಾರು ಮಾಡಲಾಗುತ್ತಿತ್ತು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಮನೆಯೊಂದರಲ್ಲಿ ಡ್ರಗ್ಸ್ ಮೇಕಿಂಗ್ ನಡೆಯುತ್ತಿತ್ತು. ಈ ಸಂಬಂಧ ನೈಜೇರಿಯಾ ಮೂಲದ ಜಾನ್ ಎಂಬ ಆರೋಪಿಯನ್ನ ಬಂಧಿಸಲಾಗಿದೆ. ಬಂಧಿತ ಆರೋಪಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆ ಪಡೆದಿದ್ದ. ವಯಸ್ಸಾದ ದಂಪತಿ ಒಬ್ಬರ ಮನೆಯಲ್ಲಿ ಬಾಡಿಗೆ ಪಡೆದು, ಅಲ್ಲಿಯೇ ಡ್ರಗ್ಸ್ ತಯಾರು ಮಾಡ್ತಿದ್ದ ಎನ್ನಲಾಗಿದೆ.
ಇನ್ನು ದಾಳಿ ವೇಳೆ ಐದು ಕೋಟಿಗೂ ಹೆಚ್ಚು ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಡ್ರಗ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಕೆಮಿಕಲ್ಸ್ ಸೀಜ್ ಮಾಡಿದ್ದಾರೆ.