Breaking News

ಪ್ರಧಾನಿ ನರೇಂದ್ರ ಮೋದಿ ಭಾಷಣ ಟೊಳ್ಳು: ‍ಪ್ರತಿಪಕ್ಷಗಳ ಟೀಕೆ

Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣವನ್ನು ‘ವಾಕ್ಚಾತುರ್ಯ ಮತ್ತು ಖಾಲಿ ಘೋಷಣೆ’ಗಳಿಂದ ಕೂಡಿದೆ ಎಂದಿರುವ ಪ್ರತಿಪಕ್ಷಗಳು, ಎಂಟು ವರ್ಷಗಳಿಂದ ಅದೇ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿವೆ. ಘೋಷಿಸಲಾಗಿರುವ ಅಂಶಗಳು ಜಾರಿಗೆ ತರುವಂತಹವುಗಳಲ್ಲ ಎಂದು ಅಭಿಪ್ರಾಯಪಟ್ಟಿವೆ.

‘ಪ್ರಧಾನಿ ಅಧಿಕಾರ ಸ್ವೀಕರಿಸಿದ ನಂತರ ದೇಶವು ‘ಅದೇ ಭಾಷಣಗಳನ್ನು’ ಕೇಳುತ್ತಿದೆ. ಆದರೆ ರೈತರು ಸೇರಿದಂತೆ ಅನ್ಯಾಯಕ್ಕೊಳಗಾದವರಿಗೆ ಯಾವುದೇ ಪರಿಹಾರಗಳನ್ನು ನೀಡುತ್ತಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸಿದ್ದಾರೆ.

‘ಮೋದಿ ಅವರು ಹೊಸ ಯೋಜನೆಗಳನ್ನು ಘೋಷಿಸುತ್ತಾರೆ, ಆದರೆ ಅವುಗಳನ್ನು ಎಂದಿಗೂ ಕಾರ್ಯಗತಗೊಳಿಸುವುದಿಲ್ಲ. ಅವರು ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ, ಆದರೆ ಎಂದಿಗೂ ಅವುಗಳನ್ನು ಪಾಲಿಸುವುದಿಲ್ಲ’ ಎಂದರು. ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸದ ಸರ್ಕಾರದ ನಡೆಯನ್ನು ಖಂಡಿಸಿದ ಅವರು, ಈ ಮೂಲಕ ಮೋದಿ ಅವರು ರೈತರನ್ನು ದುರವಸ್ಥೆಗೆ ತಳ್ಳಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವನ್ನು ಪದೇ ಪದೇ ಟೀಕಿಸಿದರೆ ದೇಶ ಪ್ರಗತಿಯಾಗುವುದಿಲ್ಲ ಎಂದು ಒತ್ತಿ ಹೇಳಿದ ಅವರು, ‘ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ರೈತರಿಗೆ ನೀರಾವರಿ ವ್ಯವಸ್ಥೆಯನ್ನು ಒದಗಿಸುವಂತಹ ಬಹಳಷ್ಟು ಕೆಲಸಗಳನ್ನು ಮಾಡಿದೆ. ಯುಪಿಎ ಅಧಿಕಾರದಲ್ಲಿದ್ದಾಗ ರೈತರ ಸಾಲವನ್ನು ಮನ್ನಾ ಮಾಡಿದೆ’ ಎಂದರು.

ಸಿಪಿಎಂ ಮುಖ್ಯಸ್ಥ ಸೀತಾರಾಂ ಯೆಚೂರಿ ಅವರೂ ಖರ್ಗೆ ಮಾತಿಗೆ ದನಿಗೂಡಿಸಿದ್ದಾರೆ. ‘ಕೋವಿಡ್‌ ಸಾಂಕ್ರಾಮಿಕದ ಅಸಮರ್ಪಕ ನಿರ್ವಹಣೆಯಿಂದ ಹಾಗೂ ಲಸಿಕೆ ಕೊರತೆಯಿಂದ ಬಳಲುತ್ತಿರುವ ಕೋಟ್ಯಂತರ ಜನರಿಗೆ ಯಾವುದೇ ಭರವಸೆ ಇಲ್ಲ. ನಿರುದ್ಯೋಗ, ಬಡತನ, ಹಸಿವು, ಬೆಲೆಗಳು ಹೆಚ್ಚುತ್ತಿವೆ. ನಮ್ಮ ಜೀವನ ಮತ್ತಷ್ಟು ಕೆಟ್ಟ ಸ್ಥಿತಿಯಲ್ಲೇ ಮುಂದುವರಿಯುವ ಎಚ್ಚರಿಕೆ ಇದು’ ಎಂದು ಅವರು ಪ್ರಧಾನಿ ಭಾಷಣವನ್ನು ವಿಶ್ಲೇಷಿಸಿದ್ದಾರೆ.

ಮೋದಿ ಭಾಷಣವು ಜನರನ್ನು ಪ್ರೇರೇಪಿಸುವಲ್ಲಿ ವಿಫಲವಾಗಿದೆ ಎಂದು ಆರ್‌ಜೆಡಿ ಹಿರಿಯ ಸಂಸದ ಮನೋಜ್ ಝಾ ಆರೋಪಿಸಿದ್ದಾರೆ. ವಿಶೇಷವಾಗಿ ಕೋವಿಡ್ ಎರಡನೇ ಅಲೆ ನಂತರ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಂತ್ವನದ ಅಗತ್ಯವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ನೀಡದ ಕಾರಣ ಪ್ರಧಾನಿಯವರ ಮಾತು ನಿರಾಶಾದಾಯಕವಾಗಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದರು. ನಿರುದ್ಯೋಗಿ ಯುವಕರು ಮತ್ತು ರೈತರ ಸಂಕಷ್ಟಗಳನ್ನು ಕಡೆಗಣಿಸಿದ ಪ್ರಧಾನಿ, ಖಾಲಿ ಘೋಷಣೆಗಳಿಗೆ ತಮ್ಮ ಭಾಷಣ ಸೀಮಿತಗೊಳಿಸಿದರು ಎಂದಿದ್ದಾರೆ.

ಮೂಲಸೌಕರ್ಯ ವಲಯದಲ್ಲಿ ₹100 ಲಕ್ಷ ಕೋಟಿ ಹೂಡಿಕೆಯ ಘೋಷಣೆ ಉಲ್ಲೇಖಿಸಿ, ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. 2019ರ ಆಗಸ್ಟ್ 15ರಂದು ಮಾಡಿದ ಪ್ರಧಾನಿ ಮಾಡಿದ್ದ ಘೋಷಣೆಗೆ ಎರಡು ವರ್ಷಗಳು ಕಳೆದಿವೆ ಎಂದು ನೆನಪಿಸಿದ್ದಾರೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ