ಕುಮಟಾ: ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ನೀಡಿರುವ ಹೇಳಿಕೆ ದೇಶದಾದ್ಯಂತ ಕೋಲಾಹಲ ಸೃಷ್ಟಿಸಿದೆ. ಪ್ರಧಾನಿ ಮೋದಿ ವಿರುದ್ಧವೇ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ದೇಶದ ಬೃಹತ್ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿಲ್ಲ. ಬಿಎಸ್‌ಎನ್‌ಎಲ್ ಉದ್ಯೋಗಿಗಳು ದೇಶದ್ರೋಹಿಗಳು. ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಸರಕಾರ ಖಾಸಗಿಕರಣಗೊಳಿಸುತ್ತಿರುವುದರಿಂದ ಅಂದಾಜು 88 ಸಾವಿರ ನೌಕರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮ್ಟಾದಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರ ವಿಡಿಯೋದಲ್ಲಿ, “ಬಿಎಸ್‌ಎನ್‌ಎಲ್ ದೇಶದ್ರೋಹಿಗಳಿಂದ ತುಂಬಿದೆ, ಅವುಗಳನ್ನು ವಿವರಿಸಲು ನಾನು ನಿಖರವಾದ ಪದಗಳನ್ನು ಬಳಸುತ್ತಿದ್ದೇನೆ”. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೂ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ ಎಂದು ನೀಡಿರುವ ಹೇಳಿಕೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸರ್ಕಾರವು ಹಣವನ್ನು ನೀಡಿದೆ, ಜನರಿಗೆ ಸೇವೆಗಳನ್ನು ನೀಡಲು ಅಗತ್ಯವಾದ ಮೂಲಸೌಕರ್ಯಗಳಿವೆ. ಆದರೂ ಅವರು (ಬಿಎಸ್‌ಎನ್‌ಎಲ್ ಉದ್ಯೋಗಿಗಳು) ಕೆಲಸ ಮಾಡುವುದಿಲ್ಲ. ಡಿಜಿಟಲ್ ಇಂಡಿಯಾದ ತಂತ್ರಜ್ಞಾನವನ್ನು ಒದಗಿಸಿದೆ. ಆದರೂ ಅವರು ಕೆಲಸ ಮಾಡಲು ಸಿದ್ಧರಿಲ್ಲ ಎಂದು ಕಿಡಿಕಾರಿದರು.
ಬಿಎಸ್‌ಎನ್‌ಎಲ್ ಇಡೀ ದೇಶಕ್ಕೆ ಕಪ್ಪುಚುಕ್ಕೆ ಆಗಿ ಮಾರ್ಪಟ್ಟಿದೆ. ಕೇಂದ್ರ ಸರಕಾರ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಬಿಎಸ್‌ಎನ್‌ಎಲ್ ಖಾಸಗಿ ಕಂಪೆನಿಗಳ ಕೈ ಸೇರಲಿದೆ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ತಿಳಿಸಿದ್ದಾರೆ.