ಹೈದರಾಬಾದ್: ಹೆತ್ತ ತಾಯಿಗೂ ಆಕೆಯ ಲವರ್ಗೂ ಜಗಳ ಆಯಿತು. ಅದು ಅತಿರೇಕಕ್ಕೆ ಹೋಗಿ ಬಲಿಯಾದುದು 5 ವರ್ಷದ ಹೆಣ್ಣು ಮಗು!
ಹೈದರಾಬಾದ್ ಸಮೀಪದ ಘಾಟ್ಕೇಸ್ ಎಂಬಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಮಗುವಿನ ತಾಯಿಗೆ 25 ವರ್ಷದ ಯುವಕ ಜತೆಗೆ ಸಂಬಂಧವಿತ್ತು. ಆದರೆ ಅದು ಬಹುಕಾಲ ಬಾಳಲಿಲ್ಲ. ಆಕೆ ಆ ಯುವಕನನ್ನು ದೂರ ಇರಿಸತೊಡಗಿದ್ದಳು. ಆತನ ಆಕೆಯ ಮನೆಗೆ ಹೋದಾಗ ಅಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದುದನ್ನು ಆ ಯುವಕ ನೋಡಿದ. ಆ ಮತ್ತೊಬ್ಬ ವ್ಯಕ್ತಿ ಇಬ್ಬರಿಗೂ ಸ್ನೇಹಿತನಾಗಿದ್ದ!
ಅಲ್ಲಿಗೆ ಆ ತಾಯಿ ಮತ್ತು ಆ ಲವರ್ ನಡುವೆ ವಾಗ್ವಾದ ಶುರುವಾಯಿತು. ಇದು ವಿಪರೀತಕ್ಕೆ ಹೋದಾಗ ಆ ಯುವಕ ಅಲ್ಲೇ ಇದ್ದ ಐದು ವರ್ಷದ ಹೆಣ್ಣು ಮಗುವಿನ ಕತ್ತನ್ನು ಬ್ಲೇಡ್ನಿಂದ ಸೀಳಿದ. ಅಷ್ಟೇ ಅಲ್ಲ, ಆ ಮತ್ತೊಬ್ಬ ಯುವಕನ ಮೇಲೂ ಎರಗಿ ಹಲ್ಲೆ ನಡೆಸಿದ. ಇಷ್ಟಾದ ಬಳಿಕ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಆ 5 ವರ್ಷದ ಕಂದಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ, ದಾರಿ ಮಧ್ಯೆಯೇ ಆ ಮಗು ಮೃತಪಟ್ಟಿತು. ಸ್ಥಳೀಯರು ಸಕಾಲಕ್ಕೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ಮಗುವಿನ ತಾಯಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ವೇಳೆ ಆಕೆ ಆ ಯುವಕನೊಂದಿಗೆ ಇದ್ದ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ. ಆದಾಗ್ಯೂ, ಆತ ಯಾಕೆ ಮಗುವಿನ ಮೇಲೆ ದಾಳಿ ನಡೆಸಿದ ಎಂಬುದು ಸ್ಪಷ್ಟವಾಗಿಲ್ಲ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.