ಹೈದರಾಬಾದ್: ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಸಂಭವಿಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಮೃತಪಟ್ಟ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ತೆಲಂಗಾಣ ಸರ್ಕಾರದ ಡೆಪ್ಯುಟಿ ಕಲೆಕ್ಟರ್ ಆಗಿ ಅಧಿಕೃತವಾಗಿ ವರದಿ ಮಾಡಿಕೊಂಡಿದ್ದಾರೆ.
ಸಂತೋಷ್ ಬಾಬು ಪತ್ನಿ ಸಂತೋಷಿ ಅವರನ್ನು ಡೆಪ್ಯುಟಿ ಕಲೆಕ್ಟರ್ ಹುದ್ದೆಗೆ ನೇಮಕ ಮಾಡಲಾಗಿದೆ. ಸಂತೋಷಿ ಅವರು ಹೈದರಾಬಾದ್‌ನ ಬಿಆರ್‌ಕೆಆರ್ ಭವನದಲ್ಲಿ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ವರದಿ ಪತ್ರವನ್ನು ನೀಡಿದ್ದಾರೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ.
ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ಸಂತೋಷಿ ಅವರನ್ನು ಕಂದಾಯ ಇಲಾಖೆಯ ಉಪ ಕಲೆಕ್ಟರ್ ಆಗಿ ನೇಮಕ ಮಾಡಲಾಗಿದೆ. ಸಂತೋಷಿ ಅವರು ಸೂಕ್ತ ತರಬೇತಿ ಪಡೆದು ತಮ್ಮ ಉದ್ಯೋಗದಲ್ಲಿ ನೆಲೆಗೊಳ್ಳುವವರೆಗೂ ಅವರಿಗೆ ಸಹಾಯ ಮಾಡುವಂತೆ ಕೆಸಿಆರ್ ತಮ್ಮ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್ ಅವರಿಗೆ ಸೂಚಿಸಿದ್ದಾರೆ. ಜೂನ್ 22 ರಂದು ಮುಖ್ಯಮಂತ್ರಿ ಕೆಸಿಆರ್ ಅವರು ಸೂರ್ಯಪೇಟೆ ಪಟ್ಟಣದ ಸಂತೋಷ್ ಬಾಬು ಅವರ ನಿವಾಸಕ್ಕೆ ತೆರಳಿ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಅಲ್ಲದೆ, ಸ್ಥಳದಲ್ಲೇ ₹5 ಕೋಟಿ ಪರಿಹಾರ ಘೋಷಿಸಿದ್ದರು. ಸಂತೋಷ್ ಬಾಬು ಅವರ ಪತ್ನಿಗೆ ಗ್ರೂಪ್ ‘ಎ’ ಕೆಲಸದ ನೇಮಕಾತಿ ಪತ್ರ ಮತ್ತು ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ 711 ಚದರ ಅಡಿಗಳಷ್ಟು ಅಳತೆ ಇರುವ ನಿವೇಶನ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಅವರು ಹಸ್ತಾಂತರಿಸಿದ್ದರು.