ನವದೆಹಲಿ: ವಿಶ್ವವ್ಯಾಪಿ ಹರಡಿರುವ ಕಿಲ್ಲರ್ ಕೊರೊನಾ ವೈರಸ್‍ಗೆ ಭಾರತದಲ್ಲಿ ಬರೋಬ್ಬರಿ 2,415 ಮಂದಿ ಬಲಿಯಾಗಿದ್ದಾರೆ. ಈವರೆಗೆ 74,292 ಮಂದಿ ಸೋಂಕಿಗೆ ತುತ್ತಾಗಿದ್ದು, 24,453 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಮೇ 17 ರಂದು ಮುಗಿಯಬೇಕಿದ್ದ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಲಾಕ್‍ಡೌನ್ 4.0 ಈವರೆಗೆ ಇದ್ದ ಲಾಕ್‍ಡೌನ್ ನಿಯಮಗಳಿಗಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಈವರೆಗೆ ಹೆಚ್ಚು ಕೊರೊನಾ ವೈರಸ್ ಸೋಂಕು ಹರಡಿದ್ದು, 24,427 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 5,125 ಮಂದಿ ಕೊರೊನಾದಿಂದ ಈವರೆಗೆ ಗುಣಮುಖರಾಗಿದ್ದು, 921 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಗುಜರಾತ್‍ನಲ್ಲಿ 8,904 ಮಂದಿಗೆ ಸೋಂಕು ತಗುಲಿದ್ದು, 537 ಮಂದಿ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 8,718 ಮಂದಿ ಸೋಂಕಿಗೆ ತುತ್ತಾಗಿದ್ದು, 61 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 7,639ಕ್ಕೆ ಏರಿದೆ. 86 ಮಂದಿ ಸಾವನ್ನಪ್ಪಿದ್ದು, 2,512 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ 925 ಮಂದಿಗೆ ಸೋಂಕು ತಗುಲಿದ್ದು, 433 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 31 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಅಂತರರಾಜ್ಯ ವಲಸಿಗರಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆಗಳಲ್ಲಿ ಈಗ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 525 ಮಂದಿ ಈವರೆಗೆ ಕೊರೊನಾಗೆ ತುತ್ತಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. 489 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 32 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇತ್ತ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿಯ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ, ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ.