ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ರಾತ್ರಿ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ರಾಜ್ಯದಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರಮಿಕರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಹೌದು. ಇಂದು ಲಾಕ್ ಡೌನ್ ನ ಮತ್ತೊಂದು ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡುವ ಸಾಧ್ಯತೆ ಇದ್ದು, ಕೆಲವು ಕಸುಬುದಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದು. ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಅರ್ಚಕರು, ಟೈಲರ್ ಗಳು, ಅಡುಗೆ ಕೆಲಸದವರು ಹಾಗೂ ಹೂಮಾರಾಟಗಾರರು ಸೇರಿ ಕೆಲವು ಕಾಯಕ ವರ್ಗಗಳಿಗೆ ಒನ್ ಟೈಂ ಪರಿಹಾರ ನೀಡೋ ನಿರೀಕ್ಷೆ ಇದೆ. ಪ್ರತೀ ಸಮುದಾಯಕ್ಕೆ ಈ ಸಲ 3,000ದಂತೆ ಒನ್ ಟೈಂ ಪರಿಹಾರಕ್ಕೆ ಪ್ಲಾನ್ ಮಾಡಲಾಗಿದೆ ಅನ್ನೋ ಮಾಹಿತಿಲಭ್ಯವಾಗಿದೆ.
ಸುಮಾರು 500ರಿಂದ 800 ಕೋಟಿ ರೂ. ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಭಾನುವಾರವೇ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆಯಾಗಬೇಕಿತ್ತು. ಆದರೆ ಸೋಮವಾರ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಕಾರಣದಿಂದ ಮುಂದೂಡಿಕೆಯಾಗಿತ್ತು. ನಿನ್ನೆ ಮಂಗಳವಾರವೂ ಮೋದಿಯವರ ರಾಷ್ಟ್ರೀಯ ಭಾಷಣ ಕಾರಣದಿಂದ ಘೋಷಣೆಯಾಗಲಿಲ್ಲ. ಹಾಗಾಗಿ ಇವತ್ತು ಸಿಎಂ ಯಡಿಯೂರಪ್ಪ ವಿಶೇಷ ಪ್ಯಾಕೇಜ್ ವಿಸ್ತರಣೆ ಘೋಷಣೆ ಮಾಡಬಹುದು ಎಂಬುದಾಗಿ ತಿಳಿದುಬಂದಿದೆ.
ಕಳೆದ ಬುಧವಾರ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ಲಾಕ್‍ಡೌನ್ ಅವಧಿಯಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ತುತ್ತಾದವರು ಆಯಾ ದಿನದ ಕೆಲಸವನ್ನೇ ನಂಬಿ ಜೀವನ ನಡೆಸುತ್ತಾ ಬಂದಿವರೇ ಆಗಿದ್ದಾರೆ. ವೃತ್ತಿನಿರತ ಕ್ಷೌರಿಕರು, ಅಗಸರು, ರೈತರು, ಆಟೋ ಟ್ಯಾಕ್ಸಿ ಚಾಲಕರು, ಹೂ, ಹಣ್ಣು ಬೆಳೆಗಾರರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಿದ್ದರು. ಉದ್ಯಮ ವಲಯವೂ ಸ್ತಬ್ಧ ಆಗಿ ಉದ್ಯಮಿಗಳು ಕಂಗಾಲಾಗಿದ್ದರು. ಇದೀಗ ಈ ವರ್ಗದವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದ್ದು, 1,610 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು.