ಮುಂಬೈ, ಏ.26- ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿನ ಸಾವು ಮತ್ತು ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ದಿನೇ ದಿನೇ ಶೋಚನೀಯವಾಗುತ್ತದೆ.
ರಾಜ್ಯದ ವಿವಿಧೆಡೆ ಕೊರೊನಾ ಹೆಮ್ಮಾರಿಯ ಅಟ್ಟಹಾಸ ಮುಂದುವರಿದಿದ್ದು, ಶನಿವಾರ ಒಂದೇ ದಿನ ಅವಧಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈ ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಲ್ಲಿ 5000ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಾಧಿತರಾಗಿದ್ದಾರೆ. ಅಲ್ಲಿ ಪ್ರತಿದಿನ ಹೊಸ ಸೋಂಕು ಪ್ರಕರಣಗಳು ದೃಢಪಡುತ್ತಲೇ ಇವೆ.
ಮಹಾರಾಷ್ಟ್ರದಲ್ಲಿ ಕಿಲ್ಲರ್ ವೈರಸ್ ಈವರೆಗೆ 323 ಜನರನ್ನು ಆಪೋಶನ ತೆಗೆದುಕೊಂಡಿದೆ. ಮತ್ತೊಂದೆಡೆ ಸೋಂಕು ಸಂಖ್ಯೆಯಲ್ಲಿಯೂ ಹೆಚ್ಚಳವಾಗಿರುವುದು ಕಳವಳಕಾರಿಯಾಗಿದೆ. ಒಂದೇ ದಿನ 600ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಪೀಡಿತರ ಸಂಖ್ಯೆ 7,628ಕ್ಕೇರಿದೆ.
ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ರಾಜ್ಯದಲ್ಲಿ ಸುಮಾರು 1000 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ರಾಜ್ಯ ಸರ್ಕಾರದ ಆರೋಗ್ಯ ಸಚಿವಾಲಯ ಈವರೆಗೆ 1.10 ಲಕ್ಷಕ್ಕೂ ಹೆಚ್ಚು ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ.