ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೊಯ್ನಾ ಜಲಾಶಯ ಭರ್ತಿಯಾಗಿದ್ದು ಭಾರೀ ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಒಟ್ಟು 105 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 86.93 ಟಿಎಂಸಿ ನೀರು ಸಂಗ್ರಹವಾಗಿದೆ. ಕೊಯ್ನಾ ಜಲಾಶಯದ 6 ಗೇಟ್ಗಳ ಮೂಲಕ 9,360 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹಾಗೂ ವಿದ್ಯುತ್ ಉತ್ಪಾದನೆಗೆ 1050 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಈ ನೀರಿನಿಂದ ಕರ್ನಾಟಕದಲ್ಲಿ ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟಗಳಲ್ಲಿ ಮೂರು ದಿನಗಳಿಂದ ಬಿಟ್ಟುಬಿಡದೇ ಸುರಿಯುತ್ತಿರುವ ಭಾರೀ ಮಳೆಗೆ ಹಿಡಕಲ್ ಹಾಗೂ ನವೀಲುತೀರ್ಥ ಜಲಾಶಯಗಳು ಭರ್ತಿಯಾಗಿವೆ. ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮನೆಯಿಂದ ಹೊರಬರಲಾಗದೇ ಪರದಾಟ ಅನುಭವಿಸುವಂತಾಗಿದೆ.
ಜಿಲ್ಲೆಯ ನದಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಯಾಗಿದ್ದು, ಸಣ್ಣಪುಟ್ಟ ಹಳ್ಳ-ನಾಲೆಗಳು ಜಲಪಾತಗಳಾಗಿ ಮಾರ್ಪಟ್ಟಿವೆ.
ನವಿಲುತೀರ್ಥ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು, 11 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಮತ್ತೆ ಆತಂಕ ಮೂಡಿದ್ದು ನೀರಿನ ಮಟ್ಟ ಗಂಟೆಯಿಂದ ಗಂಟೆಗೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗ್ತಿರೋ ಹಿನ್ನೆಲೆಯಲ್ಲಿ ನದಿ ತೀರದ ಜನರಿಗೆ ಮುಂಜಾಗ್ರತೆ ವಹಿಸುವಂತೆ ಶಾಸಕ ಮಹಾದೇವಪ್ಪ ಯಾದವಾಡ ಮನವಿ ಮಾಡಿದ್ದಾರೆ.
ಮಲಪ್ರಭಾ ನದಿಗೆ 10,000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇದೆ. ಆದ್ದರಿಂದ ಜನ ಮತ್ತು ಜಾನುವಾರುಗಳ ಸಮೇತ ಸ್ಥಳಾಂತರವಾಗಿ, ಯಾವುದೇ ಪ್ರಾಣಪಾಯ ಆಗದಂತೆ ಗಮನ ಹರಿಸಿ ಎಂದು ಮನವಿ ಮಾಡಿದ್ದಾರೆ.