ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 358 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಐವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಇವರಲ್ಲಿ ನಾಲ್ವರು ಬೆಳಗಾವಿ ಹಾಗೂ ಒಬ್ಬರು ಗೋಕಾಕ ತಾಲ್ಲೂಕಿನವರು. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು’ ಎಂದು ಜಿಲ್ಲಾಡಳಿತ ತಿಳಿಸಿದೆ.
‘ಜಿಲ್ಲೆಯಲ್ಲಿ ಮಾದರಿ ಸಂಗ್ರಹ ಸಂಖ್ಯೆ 61,752ರ ಗಡಿ ದಾಟಿದೆ. ಈ ಪೈಕಿ 52,779 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 818 ಮಂದಿಯ ಪರೀಕ್ಷಾ ವರದಿಯ ಫಲಿತಾಂಶ ಬರಬೇಕಿದೆ’ ಎಂದು ಮಾಹಿತಿ ನೀಡಿದೆ.
‘404 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದೆ.
ಗೋಕಾಕ ವರದಿ: ‘ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳಲ್ಲಿ ಶನಿವಾರ 59 ಜನರಿಗೆ ಕೊರೊನಾ ದೃಢಪಟ್ಟಿದೆ. ಗೋಕಾಕ ನಗರದಲ್ಲಿ 38, ಕಲ್ಲೋಳಿ 3, ಘಟಪ್ರಭಾ 3, ಪುಲಗಡ್ಡಿ 4, ಶೀಗಿಹಳ್ಳಿ 2, ಮಲ್ಲಾಪೂರ ಪಿ.ಜಿ., ಕೊಣ್ಣೂರ, ಕೆಮ್ಮನಕೋಲ, ಮಮದಾಪೂರ, ಮುನ್ಯಾಳ, ದುಂಡಾಪೂರ, ಕೌಜಲಗಿ, ಪಾಮಲದಿನ್ನಿ ಹಾಗೂ ಮೂಡಲಗಿ ಪಟ್ಟಣದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ’ ಎಂದು ಟಿಎಚ್‌ಒ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.