ಬೆಳಗಾವಿ: ಪ್ರವಾಹಕ್ಕೆ ನಲುಗಿ ಒಂದು ವರ್ಷ ಕಳೆದರೂ ಜಿಲ್ಲೆಯ ಎಲ್ಲ ಸಂತ್ರಸ್ತರಿಗೆ ಇನ್ನೂ ಪರಿಹಾರ ದೊರೆತಿಲ್ಲ. ಪರಿಹಾರ ಕೊಡುವಂತೆ ಒತ್ತಾಯಿಸಿ, ಈಗಲೂ ಅಲ್ಲೊಂದು, ಇಲ್ಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ಸೇರಿದಂತೆ ಬಹುತೇಕ ಎಲ್ಲ ನದಿಗಳಲ್ಲಿ ಪ್ರವಾಹ ಕಾಣಿಸಿಕೊಂಡಿತ್ತು. ಇದರ ಜೊತೆ ಅತಿವೃಷ್ಟಿಯೂ ಕೂಡಿಕೊಂಡು ಅಪಾರ ಹಾನಿಯನ್ನುಂಟು ಮಾಡಿತ್ತು.
ಬೆಳಗಾವಿ, ಖಾನಾಪುರ, ಚಿಕ್ಕೋಡಿ, ಅಥಣಿ, ಗೋಕಾಕ, ರಾಮದುರ್ಗ, ಸವದತ್ತಿ, ರಾಯಬಾಗ, ಹುಕ್ಕೇರಿ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವು. 972 ಗ್ರಾಮಗಳು ಜಲಾವೃತವಾಗಿದ್ದವು. 44,166 ಮನೆಗಳು ಹಾನಿಗೊಳಗಾಗಿದ್ದವು. ಒಂದು ಲಕ್ಷಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿದ್ದರು.
38 ಜನರು ಸಾವಿಗೀಡಾಗಿದ್ದರು. ಅಂದಾಜು 2.21 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿತ್ತು. ಅತಿವೃಷ್ಟಿ ಹಾಗೂ ಪ್ರವಾಹ ಇಡೀ ಜಿಲ್ಲೆಯನ್ನು ಹಿಂಡಿಹಿಪ್ಪಿ ಮಾಡಿತ್ತು.
ವರ್ಷವಾದರೂ ತಪ್ಪಿಲ್ಲ ಅಲೆದಾಟ!:
ಹಾನಿಗೊಳಗಾದ ಪ್ರಮಾಣ ಆಧರಿಸಿ ಮನೆಗಳನ್ನು ಎ.ಬಿ.ಸಿ ಕೆಟಗೇರಿ ಮಾಡಲಾಗಿತ್ತು. ಸಂಪೂರ್ಣವಾಗಿ ಹಾನಿಗೊಳಗಾದ ‘ಎ’ ಕೆಟಗೇರಿಯ ಮನೆಗಳಿಗೆ ₹ 5 ಲಕ್ಷ ಪರಿಹಾರ ಘೋಷಿಸಲಾಗಿತ್ತು. ಮೊದಲ ಕಂತಿನ ಹಣ ಪಡೆದು ಮನೆ ಕಟ್ಟುವ ಕೆಲಸ ಆರಂಭಿಸಿದ್ದರು. ಈಗ ಸ್ಲ್ಯಾಬ್ ಹಂತಕ್ಕೆ ಬಂದು ನಿಂತಿದ್ದು, 2ನೇ ಹಾಗೂ 3ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಹಣ ಬಾರದಿದ್ದರಿಂದ ಕೆಲಸಗಳು ಅರ್ಧಕ್ಕೆ ನಿಂತಿವೆ.
ಅಲ್ಪಸ್ವಲ್ಪ ಹಾನಿಗೊಳಗಾಗಿದ್ದ ‘ಬಿ’ ಹಾಗೂ ‘ಸಿ’ ಕೆಟಗೇರಿಯ ಬಹುತೇಕ ಮನೆಗಳಿಗೆ ಪರಿಹಾರ ನೀಡಲಾಗಿದೆ. ಇದುವರೆಗೆ ಒಟ್ಟಾರೆಯಾಗಿ 35 ಸಾವಿರ ಮನೆಗಳಿಗೆ ₹ 488.74 ಕೋಟಿ ನೀಡಲಾಗಿದೆ. ದಾಖಲೆ ಪತ್ರಗಳು ಹಾಗೂ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ 9,166 ಮನೆಗಳಿಗೆ ಪರಿಹಾರ ಸಿಕ್ಕಿಲ್ಲ.
ಮನೆಗಳು ಪೂರ್ಣಗೊಳ್ಳದಿರುವುದರಿಂದ ಹಾಗೂ ಪರಿಹಾರ ದೊರೆಯದಿದ್ದರಿಂದ ಹಲವು ಕಡೆ ಸಂತ್ರಸ್ತರು ದೇವಸ್ಥಾನಗಳ ಆವರಣದಲ್ಲಿ, ಶಾಲಾ ಆವರಣದಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ಈಗಲೂ ವಾಸಿಸುತ್ತಿದ್ದಾರೆ.
ರಾಮದುರ್ಗ ತಾಲ್ಲೂಕಿನ ಹಲಗತ್ತಿಯ ದೇವಸ್ಥಾನದಲ್ಲಿ, ಪಡಸಿ ಗ್ರಾಮದ ಸಮುದಾಯ ಭವನದಲ್ಲಿ, ಶಿವಪೇಟೆಯ ಸಮುದಾಯ ಭವನದಲ್ಲಿ, ಗೋಕಾಕ ತಾಲ್ಲೂಕಿನ ಕಲಾರಕೊಪ್ಪ ಗ್ರಾಮದ ಶಾಲೆಯಲ್ಲಿ ಜನರು ಮಾಡುತ್ತಿದ್ದಾರೆ. ಗೋಕಾಕ ನಗರದ ಆಶ್ರಯ ಬಡಾವಣೆಯ ಅರಣ್ಯ ಇಲಾಖೆಯ ಜಾಗದಲ್ಲಿ ಸುಮಾರು 300 ಕುಟುಂಬಗಳು ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿವೆ.
ತಾತ್ಕಾಲಿಕ ನೆರವಿಗಾಗಿ ₹ 10 ಸಾವಿರ, ಬಾಡಿಗೆಗಾಗಿ ಪ್ರತಿ ತಿಂಗಳು ₹ 5 ಸಾವಿರ, ವ್ಯಾಪಾರಸ್ಥರಿಗೆ ₹ 25 ಸಾವಿರ ಪರಿಹಾರ ನೀಡುವ ಭರವಸೆಯೂ ಪೂರ್ಣವಾಗಿ ಈಡೇರಿಲ್ಲ. ಪ್ರವಾಹ ಸಂದರ್ಭದಲ್ಲಿ ಮೃತರಾಗಿದ್ದ 38 ಜನರ ಪೈಕಿ ಇನ್ನೂ ಐದು ಜನರ ಕುಟುಂಬಗಳಿಗೆ ಪರಿಹಾರ ಸಿಕ್ಕಿಲ್ಲ.