ಬೆಳಗಾವಿ: ‘ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಅವರು ಮಣಗುತ್ತಿ ಘಟನೆಯ ವಾಸ್ತವ ತಿಳಿಯದೆ ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಎಸಗಿದ್ದಾರೆ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಟೀಕಿಸಿದ್ದಾರೆ.
‘ಸಮಗ್ರ ಮಾಹಿತಿ ಪಡೆದು ಟ್ವೀಟ್ ಮಾಡಬೇಕಿತ್ತು. ಆ ಗ್ರಾಮದಲ್ಲಿ ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡಿಗರಿಂದ ಶಿವಾಜಿ ಪ್ರತಿಮೆಗೆ ಅವಮಾನವಾಗಿಲ್ಲ. ಪ್ರತಿಷ್ಠಾಪಿಸಿದರೆ ತೆರವುಗೊಳಿಸಿದ್ದಾರೆ. ಆದಾಗ್ಯೂ ಕರ್ನಾಟಕ ಸರ್ಕಾರ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಮಹಾರಾಷ್ಟ್ರ ಪರವಾಗಿ ವಕಾಲತ್ತು ವಹಿಸಿ ಕನ್ನಡ ನೆಲಕ್ಕೆ ದ್ರೋಹ ಎಸಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.
‘ಅವರು ಬಹಿರಂಗವಾಗಿ ಕ್ಷಮೆ ಯಾಚಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.