ಬೆಳಗಾವಿ: ಕಳೆದ ಬಾರಿ ಪ್ರವಾಹದ ಹಿನ್ನೆಲೆ ನಮಗೆ ಅನುಭವ ಇದೆ. ಹೀಗಾಗಿ ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ್ ತಿಳಿಸಿದ್ದಾರೆ.
ಗ್ರಾಮ, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸದ್ಯ ಕೃಷ್ಣಾ ನದಿಯಲ್ಲಿ 1 ಲಕ್ಷ 55 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಅದು 2.5ಲಕ್ಷ ಕ್ಯೂಸೆಕ್ಗೆ ಏರಿಕೆಯಾದ್ರೆ ಮಾತ್ರ ಜಮೀನು- ಮನೆಗೆ ನೀರು ನುಗ್ಗುವ ಆತಂಕ ಇದೆ. ಆದ್ದರಿಂದಾಗಿ ನದಿ ತೀರದ ಹಳ್ಳಿಗಳಲ್ಲಿ ಜನ ಜಾನುವಾರಗಳ ರಕ್ಷಣೆ ಸಿದ್ಧತೆ ಕೈಗೊಂಡಿದ್ದು, ಇದರ ಕುರಿತು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ನಿಪ್ಪಾಣಿಯಲ್ಲಿ 5 ಪರಿಹಾರ ಕೇಂದ್ರಗಳನ್ನು ಪ್ರಾರಂಭ ಮಾಡಿದ್ದೇವೆ.. ಹಾಗೂ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳೂ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
- ಅಥಣಿ ತಾಲೂಕಿನಲ್ಲಿ 25 ಬೋಟ್ಗಳ ವ್ಯವಸ್ಧೆ ಮಾಡಿಕೊಳ್ಳಲಾಗಿದ್ದು, ನದಿ ನೀರಿನ ಮಟ್ಟ ಏರಿದ್ರೆ ಪ್ರತಿ ಹಳ್ಳಿಯಲ್ಲಿ ಡಂಗೂರ ಸಾರಲು ವ್ಯವಸ್ಥೆ ಮಾಡೊಕೊಂಡಿದ್ದೇವೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ ನಿಂದ ನೀರು ಬಿಡುವ ಕುರಿತು ಅಲ್ಲಿಯ ಜಿಲ್ಲಾಧಿಕಾರಿ ಜೊತೆ ನಾನೇ ಖುದ್ದು ಸಂಪರ್ಕದಲ್ಲಿದ್ದೇನೆ. ಫೋನ್ ಸಂಪರ್ಕ ಮಾಡಿ ನೀರಿನ ಬಿಡುಗಡೆ ಕುರಿತು ಮಾಹಿತಿ ಪಡೆಯುತ್ತಿದ್ದೇನೆ. ಪ್ರವಾಹದ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ ಎಂದು ಹಿರೇಮಠ ಅವರು ತಿಳಿಸಿದರು.