ಬೆಂಗಳೂರು: ಜೈಲಿನಲ್ಲೇ ಇದ್ದು ಮರ್ಡರ್ ಮಾಡೋಕೆ ಸ್ಕೆಚ್ ಹಾಕಿದ್ದ ಖತರ್ನಾಕ್ ಗ್ಯಾಂಗ್ನ ಒಂಬತ್ತು ಜನ ಆರೋಪಿಗಳನ್ನು ಪೊಲೀಸರು ಹೆರೆಮುರಿ ಕಟ್ಟಿದ್ದಾರೆ.
ಕಾಮಾಕ್ಷಿಪಾಳ್ಯ ನಿವಾಸಿ ವರಲಕ್ಷ್ಮೀ ಎಂಬುವವರ ಪತಿ ಗೋವಿಂದೇ ಗೌಡನ ಹತ್ಯೆಯ ಪ್ರತೀಕಾರವಾಗಿ ಕೊಲೆ ಮಾಡಿದ ಆರೋಪಿಗಳ ಹತ್ಯೆಗೆ ವರಲಕ್ಷ್ಮೀ ಸುಪಾರಿ ನೀಡಿದ್ದರು ಎನ್ನಲಾಗಿದೆ. ವರಲಕ್ಷ್ಮೀ ಹಾಗೂ ಗೋವಿಂದೇಗೌಡನಿಗೆ ಆತ್ಮೀಯನಾಗಿದ್ದ ಚಿಕ್ಕತಿಮ್ಮೇಗೌಡ, ತಾನು ಬೆಳೆಯುತ್ತಿದ್ದಂತೆ ಇಬ್ಬರನ್ನ ದೂರ ಮಾಡಿದ್ದ. ವರಲಕ್ಷ್ಮೀ ದಂಪತಿಗೆ ಮಕ್ಕಳಿಲ್ಲದ ಕಾರಣ ಚಿಕ್ಕತಿಮ್ಮೇಗೌಡನನ್ನು ಬೆಳೆಸಿ, ಆತನಿಗೆ ಒಳ್ಳೆಯ ಹೆಸ್ರು ತಂದುಕೊಟ್ಟಿದ್ರು. ಆದರೆ ಬಳಿಕ ಆತನ ವರ್ತನೆಯಿಂದ ಬೇಸತ್ತ ವರಲಕ್ಮೀ ಆತನನ್ನು 2016ರಲ್ಲಿ ಕೊಲ್ಲಿಸಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನ ಬಂಧಿಸಿದ ಪೊಲೀಸ್ರು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ರು.
ಗೋವಿಂದೇಗೌಡನ ಮೇಲೆ ದ್ವೇಷ ಕಾರುತ್ತಿದ್ದ ಚಿಕ್ಕತಿಮ್ಮೇಗೌಡನ ಸಹೋದರರು 2018 ರಲ್ಲಿ ಆತನನ್ನ ಹತ್ಯೆ ಮಾಡಿದ್ರು. ತನ್ನ ಗಂಡನನ್ನ ಕೊಲ್ಲಿಸಿದ ದ್ವೇಷಕ್ಕೆ ಚಿಕ್ಕತಿಮ್ಮೇಗೌಡನ ಸಹೋದರರಾದ ನಟರಾಜ ಹಾಗೂ ಹೇಮಂತ್ ಹತ್ಯೆಗೆ ವರಲಕ್ಷ್ಮೀ ಪ್ಲ್ಯಾನ್ ಮಾಡಿದ್ದು, ರಾಜಗೋಪಾಲ ನಗರ ರೌಡಿಶೀಟರ್ ರಾಜ ಅಲಿಯಾಸ್ ಕ್ಯಾಟ್ ರಾಜನಿಗೆ ಬರೋಬ್ಬರಿ 1 ಕೋಟಿ ರೂಪಾಯಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಜೈಲಿನಲ್ಲೇ ಒಂದು ಕೋಟಿ ರೂಪಾಯಿಗೆ ಡೀಲ್ ಕುದುರಿಸಿದ್ದ ಕ್ಯಾಟ್ ರಾಜ ಹೇಮಿ ಅಲಿಯಾಸ್ ಹೇಮಂತ್, ಸೋದರ ಚೇತು ಮತ್ತು ಸಹಚರರಿಂದ ಹತ್ಯೆಗೆ ಪ್ಲ್ಯಾನ್ ಮಾಡಿದ್ದ. ಈ ವಿಚಾರ ತಿಳಿದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ನಟರಾಜ್ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಕ್ಯಾಟ್ ರಾಜನ ಒಂಭತ್ತು ಜನ ಸಹಚರರನ್ನ ಬಂಧಿಸಿದ್ದಾರೆ.
ಜೊತೆಗೆ ಬಾಡಿ ವಾರಂಟ್ ಮೂಲಕ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಕ್ಯಾಟ್ ರಾಜ ಮತ್ತು ಬಳ್ಳಾರಿ ಜೈಲಿನಲ್ಲಿರುವ ಹೇಮಂತ್ನನ್ನ ತಮ್ಮ ವಶಕ್ಕೆ ಪಡೆಯಲಿದ್ದಾರೆ. ಕಾಮಾಕ್ಷಿಪಾಳ್ಯ ಹಾಗೂ ರಾಜಗೋಪಾಲನಗರ ಪೊಲೀಸ್ರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳ ತನಿಖೆ ಮುಂದುವರೆದಿದೆ.