ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ ಸರಿಸುಮಾರು ಮೂರು ಸಾವಿರದಷ್ಟು ಕೋವಿಡ್ ವೈರಸ್ ಸೋಂಕಿತರ ಸಾವಾಗಿದೆ. ಈ ಮೂಲಕ ಒಟ್ಟಾರೆ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕು ಸಾವಿರ ಗಡಿದಾಟಿದೆ.
ಸೋಮವಾರ 115 ಮಂದಿ ಸೋಂಕು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ವರದಿಯಾಗಿದ್ದು, ಒಟ್ಟಾರೆ ಸಂಖ್ಯೆ 4062ಕ್ಕೆ ಏರಿಕೆಯಾಗಿದೆ. ಒಂದು ತಿಂಗಳ ಹಿಂದಷ್ಟೆ (ಜುಲೈ 16ಕ್ಕೆ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ಗಡಿದಾಟಿತ್ತು. ಆ ನಂತರ ನಿತ್ಯ ಸರಾಸರಿ ನೂರು ಸೋಂಕಿತರು ಸಾವು ವರದಿಯಾಗಿದೆ. ಜು.17 ರಿಂದ ಆ.17ವರೆಗೂ ಬರೋಬ್ಬರಿ 3,030 ಸೋಂಕಿತರ ಸಾವಾಗಿದೆ.
ರಾಜ್ಯಕ್ಕೆ ಕೋವಿಡ್ ಸೋಂಕು ಕಾಲಿಟ್ಟು ನಾಲ್ಕೂವರೆ ತಿಂಗಳಿಗೆ (130 ದಿನ) ಸೋಂಕಿತರ ಸಾವಿನ ಸಂಖ್ಯೆ ಒಂದು ಸಾವಿರ ತಲುಪಿತ್ತು. ಆದರೆ, ಒಂದು ತಿಂಗಳ ಅಂತರದಲ್ಲಿಯೇ ನಾಲ್ಕು ಸಾವಿರಕ್ಕೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.
ಇನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿಯೇ 1.78ಲಕ್ಷ ಮಂದಿಗೆ ಸೋಂಕು ತಗುಲಿದ್ದು, 1.27 ಲಕ್ಷ ಸೋಂಕಿತರು ಗುಣಮುಖರಾಗಿದ್ದಾರೆ.
ಶೇ.36.5 ರಷ್ಟು ಸಾವು ರಾಜಧಾನಿಯಲ್ಲಿ!
ಕೊರೊನಾ ಸೋಂಕು ಪ್ರಕರಣಗಳಂತೆಯೇ ಸೋಂಕಿತರ ಸಾವಿನಲ್ಲೂ ರಾಜಧಾನಿಯೇ ಮುಂದಿದೆ. ರಾಜ್ಯದ ಒಟ್ಟಾರೆ ಸೋಂಕಿತರಲ್ಲಿ ಶೇ.40 ರಷ್ಟು, ಸೋಂಕಿನಿಂದ ಸಾವಿಗೀಡಾದವರಲ್ಲಿ ಶೇ.36.5 ರಷ್ಟು ಮಂದಿ ಬೆಂಗಳೂರಿನರು. ಈವರೆಗೂ ಬೆಂಗಳೂರಿನಲ್ಲಿ 1483 ಸೋಂಕಿತರು ಮೃತಪಟ್ಟಿದ್ದಾರೆ. ಅಲ್ಲದೆ, ಕಳೆದ ಒಂದು ತಿಂಗಳಲ್ಲಿ 900 ಸೋಂಕಿತ ಸಾವಾಗಿದೆ. ಅತಿ ಕಡಿಮೆ ಚಿತ್ರದುರ್ಗದಲ್ಲಿ 14 ಸೋಂಕಿತರು ಮೃತಪಟ್ಟಿದ್ದಾರೆ.
ತಡವಾಗಿ ಆಸ್ಪತ್ರೆಗೆ ಬಂದರೆ ಕಷ್ಟ!
ಕೊರೊನಾ ಸೋಂಕಿತರು ತಡವಾಗಿ ಆಸ್ಪತ್ರೆಗೆ ಆಗಮಿಸುತ್ತಿರುವುದೇ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. `ಸೋಂಕು ಲಕ್ಷಣ ಕಾಣಿಸಿಕೊಂಡಗಾ ನಿರ್ಲಕ್ಷ ಮಾಡಿ ಉಸಿರಾಟ ಸಮಸ್ಯೆ, ತೀವ್ರ ಕೆಮ್ಮು ಕಾಣಿಸಿಕೊಂಡ ನಂತರ ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಈ ವೇಳೆ ಶ್ವಾಸಕೋಶದಲ್ಲಿ ಸಾಕಷ್ಟು ಹಾನಿಯಾಗಿರುತ್ತದೆ. ಇದರಿಂದ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡರೂ ತಡ ಮಾಡದೇ ಪರೀಕ್ಷೆಗೆ ಒಳಗಾಗಬೇಕು. ಸೋಂಕು ಉಲ್ಬಣವಾಗುವವರಿಗೂ ಕಾಯಬಾರದು’ ಎಂದು ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್ ತಿಳಿಸಿದ್ದಾರೆ.
ಸೋಮವಾರ 115 ಸಾವು
ಬೆಂಗಳೂರು 39, ಬೆಳಗಾವಿ ಮತ್ತು ಹಾಸನ ತಲಾ 9, ದಕ್ಷಿಣ ಕನ್ನಡ 8, ಕಲಬುರಗಿ 7 ಸೇರಿದಂತೆ ಸೋಮವಾರ ರಾಜ್ಯಾದಂತ 115 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ವರದಿಯಾಗಿದೆ.
ಜಿಲ್ಲಾವಾರು ಸೋಂಕಿರ ಸಾವು
ಬೆಂಗಳೂರು -1483, ಮೈಸೂರು 309,
200ಕ್ಕೂ ಹೆಚ್ಚು : ದಕ್ಷಿಣ ಕನ್ನಡ 275, ಧಾರವಾಡ 239,
100ಕ್ಕೂ ಹೆಚ್ಚು : ಬಳ್ಳಾರಿ 169, ಕಲಬುರಗಿ 170, ಬೆಳಗಾವಿ 130, ದಾವಣಗೆರೆ 128, ಬೀದರ್ 108, ಹಾಸನ 132
50ಕ್ಕೂ ಹೆಚ್ಚು: ತುಮಕೂರು 97, ಉಡುಪಿ 80, ರಾಯಚೂರು 60 , ವಿಜಯಪುರ 57, ಬಾಗಲಕೋಟೆ 55, ಶಿವಮೊಗ್ಗ 73 , ಕೊಪ್ಪಳ 63, ಗದಗ 57, ಚಿಕ್ಕಬಳ್ಳಾಪುರ 50, ಹಾವೇರಿ 55,
ರಾಜ್ಯದ ಪ್ರಮುಖ ಅಂಶಗಳು
– ಒಂದೇ ದಿನ ವರದಿಯಾದ ಅತಿ ಹೆಚ್ಚು ಸಾವು – 124 ( ಆ.16)
– ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ.
– ಸೋಂಕಿತರ ಮರಣ ದರ ಶೇ.1.74 ರಷ್ಟು
– ಸೋಂಕಿತರ ಗುಣಮುಖ ದರ – 63.6
– ಕೋವಿಡ್ ಸೋಂಕು ದೃಢಪಟ್ಟು ಅನ್ಯಕಾರಣಗಳಿಗೆ ಮೃತಪಟ್ಟವರು – 16
ಸೋಂಕಿತ ಸಾವು
100 – ಜೂನ್ 17
500 – ಜುಲೈ 10
1000 – ಜುಲೈ 16
2000 – ಜುಲೈ 28
3000 – ಆಗಸ್ಟ್ 8
4000 – ಆಗಸ್ಟ್ 17
ಸೋಮವಾರ ಗುಣಮುಖರೇ ಹೆಚ್ಚು
ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಸೋಂಕಿತರಿಗಿಂತ ಗುಣಮುಖರ ಸಂಖ್ಯೆ ಹೆಚ್ಚು ವರದಿಯಾಗಿದೆ. ಹೊಸದಾಗಿ 6317 ಮಂದಿಗೆ ಸೋಂಕು ತಗುಲಿದ್ದರೆ, 7071 ಮಂದಿ ಸೋಂಕಿನಿಂದ ಮುಕ್ತರಾಗಿದ್ದಾರೆ.
ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳು 2,33,283ಕ್ಕೆ, ಗುಣಮುಖರಾದವರ ಸಂಖ್ಯೆ 1,48,562 ಏರಿಕೆಯಾಗಿದೆ. ಇಂದಿಗೂ 80,643 ಸೋಂಕಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 695 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ 14 ಸಾವಿರ ರ‍್ಯಾಪಿಡ್ ಆಯಂಟಿಜನ್, 23 ಸಾವಿರ ಆರ್‌ಟಿಪಿಸಿಆರ್ ಸೇರಿ ಒಟ್ಟು 37,700 ಸೋಂಕು ಪರೀಕ್ಷೆಗಳು ನಡೆದಿವೆ. ಈ ಪೈಕಿ 6317 ಪಾಸಿಟಿವ್ ವರದಿಯಾಗಿದೆ. ಪಾಸಿಟಿವಿಟ ದರ ಶೇ.17 ರಷ್ಟಿದೆ. ಅಂದರೆ ಪರೀಕ್ಷೆಗೊಳಪಟ್ಟ ನೂರು ಮಂದಿಯಲ್ಲಿ 17 ಮಂದಿ ಪಾಸಿಟಿವ್ ವರದಿಯಾಗಿದೆ.
ಜಿಲ್ಲಾವಾರು ಸೋಂಕು ಪ್ರಕರಣ
ಬೆಂಗಳೂರು 2053, ಬಳ್ಳಾರಿ 319, ಶಿವಮೊಗ್ಗ 397, ಉಡುಪಿ 268, ಮೈಸೂರು 597, ಕಲಬುರಗಿ 211, ಹಾಸನ 250, ಧಾರವಾಡ 201 ಪ್ರಕರಣಗಳು ವರದಿಯಾಗಿದೆ. ಉಳಿದಂತೆ ಬೆಳಗಾವಿ, ದಕ್ಷಿಣ ಕನ್ನಡ, ದಾವಣಗೆರೆ, ಕೋಲಾರ, ಕೊಪ್ಪಳ, ರಾಯಚೂರು, ತುಮಕೂರು ಸೇರಿ ಏಳು ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು, ಏಳು ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.
ಗುಣಮುಖರು
ಬೆಂಗಳೂರು 2190, ಬಳ್ಳಾರಿ 346 , ಬೆಳಗಾವಿ, ಹಾಸನ, ದಾವಣಗೆರೆ, ದಕ್ಷಿಣ ಕನ್ನಡ , ಕೊಪ್ಪಳ, ಕೋಲಾರ, ಮೈಸೂರು, ತುಮಕೂರು, ಉಡುಪಿಯಲ್ಲಿ ಸೇರಿ ಒಂಬತ್ತು ಜಿಲ್ಲೆಗಳಲ್ಲಿ 200ಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌ನಿಂದ ಬಿಡುಗಡೆಯಾಗಿದ್ದಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??