ಬೆಂಗಳೂರು: ಸರ್ಕಾಋದ ಆದೇಶದಂತೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಶೇಕಡ 50 ಹಾಸಿಗೆ ಒದಗಿಸದ ಐದು ಖಾಸಗಿ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ನೃಪತುಂಗಾ ರಸ್ತೆಯಲ್ಲಿರುವ ಸೇಂಟ್ ಮಾರ್ಥಾಸ್ ಆಸ್ಪತ್ರೆ, ಶಂಕರಪುರದ ರಂಗದೊರೆ ಮೆಮೋರಿಯಲ್ ಆಸ್ಪತ್ರೆ, ಕ್ವೀನ್ಸ್ ರಸ್ತೆಯ ಶಿಫಾ ಆಸ್ಪತ್ರೆ, ಕನ್ನಿಂಗ್ಹ್ಯಾಂ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಹಾಗೂ ದೇವರಬೀಸನಹಳ್ಳಿಯ ಸಕ್ರಾ ಆಸ್ಪತ್ರೆ ವಿರುದ್ಧ ದೂರು ದಾಖಲಾಗಿರುವಂಥದ್ದು.
ಕರೊನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಿದ ಬೆಡ್ಗಳ ಕುರಿತು ಐಎಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಲು ನಿರಾಕರಿಸಿದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರ ವಿರುದ್ಧ ಮಾರತ್ತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್ ಎಂಬುವರು ಕೊಟ್ಟ ದೂರಿನ ಮೇರೆಗೆ ದೇವರಬೀಸನಹಳ್ಳಿಯ ಸಕ್ರಾ ಆಸ್ಪತ್ರೆಯ ಮುಖ್ಯಸ್ಥ ದೀಪಕ್ ಬಲಾನಿ, ದೀಪ್ತಿ ಹಾಗೂ ದೀಪಕ್ ಅಗರೆಕಡ್ ಎಂಬುವರ ವಿರುದ್ಧ ಸರ್ಕಾರದ ಆದೇಶ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜು.29ರಂದು ಐಎಎಸ್ ಅಧಿಕಾರಿ ಉಮಾ ಮಹಾದೇವ್, ಐಪಿಎಸ್ ಸುನೀಲ್ ಅಗರ್ವಾಲ್, ನೋಡಲ್ ಅಧಿಕಾರಿ ಚನ್ನಕೇಶವ ಅವರು ಪರಿಶೀಲನೆಗಾಗಿ ದೇವರಬೀಸನಹಳ್ಳಿಯಲ್ಲಿರುವ ಸಕ್ರಾ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಸರ್ಕಾರದ ಆದೇಶದಂತೆ ಕರೊನಾ ಸೋಂಕಿತರ ಚಿಕಿತ್ಸೆಗೆ ಶೇ. 50 ಬೆಡ್ಗಳನ್ನು ಮೀಸಲಿರಿಸಲಾಗಿದೆ. ಜೂ.23ರಿಂದ ಜು.29ರವರೆಗಿನ ಅವಧಿಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಬೆಡ್ಗಳ ವಿವರ ಕೇಳಿದ್ದರು. ಈ ವೇಳೆ ಆಸ್ಪತ್ರೆಯ ಮುಖ್ಯಸ್ಥ ಮಾಹಿತಿ ನೀಡಲು ನಿರಾಕರಿಸಿ, ಸರ್ಕಾರಿ ಆದೇಶವನ್ನು ಉಲ್ಲಂಸಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.