Breaking News

ನನ್ನ ಮೇಲಿರೋ ಸಿಟ್ಟಿಗೆ ರಾಮನಗರ ಜನರ ಜೀವದ ಜೊತೆ ಚೆಲ್ಲಾಟ: ಎಡಿಜಿಪಿ ವಿರುದ್ಧ ಎಚ್‍ಡಿಕೆ ಆರೋಪ

Spread the love

ಬೆಂಗಳೂರು: ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡುವ ಮೂಲಕ ನನ್ನ ಮೇಲಿರುವ ಸಿಟ್ಟಿಗೆ ರಾಮನಗರ ಜನತೆ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಎಡಿಜಿಪಿ ಅಲೋಕ್ ಮೋಹನ್ ವಿರುದ್ಧ ಆರೋಪ ಮಾಡಿದ್ದಾರೆ.

ಪಬ್ಲಿಕ್ ಟವಿ ಜೊತೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಸಿಎಂ ಬಿ.ಎಸ್ ಯಡಿಯೂರಪ್ಪ ಜೊತೆಗೆ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಎರಡೆರಡು ಬಾರಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ಅಧಿಕಾರಿಗಳ ಮಾತು ಕೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತ ನಿರ್ಧಾರ ಮಾಡ್ಕೊಬೇಡಿ ಎಂದು ಹೇಳಿದ್ದೆ. ನನಗೆ ಪ್ರಾರಂಭಿಕ ಹಂತದಲ್ಲೇ ಬಂದ ಮಾಹಿತಿ ಪ್ರಕಾರ, ಸರ್ಕಾರಿ ಅಧಿಕಾರಿ ಪ್ರಸ್ತುತ ಇರುವ ಎಡಿಜಿಪಿ ಅವರೇ ಖುದ್ದು ಪಾದರಾಯನಪುರದ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಬೇಕು ಎಂದು ಸರ್ಕಾರದ ಗಮನ ಸೆಳೆದಿದ್ದಾರೆ. ಈ ಬಗ್ಗೆ ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಬಳಿ ಮಾತನಾಡಿದ್ದೆ. ಅವರೂ ನನ್ನ ಮಾತಿಗೆ ಸ್ಪಂದಿಸಿದ್ದರು. ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುವ ಬಗ್ಗೆ ಮರು ಚಿಂತನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು ಎಂದರು.

ಆದರೆ 4 ಗಂಟೆ ಬಳಿಕ ಮೊದಲ ಬ್ಯಾಚ್ 49 ಮಂದಿಯನ್ನು ರಾಮನಗರ ಕಾರಾಗೃಹಕ್ಕೆ ಕಳುಹಿಸಿದರು. ಮರುದಿನ ಇನ್ನೂ 72 ಮಂದಿಯನ್ನು ಕರೆದುಕೊಂಡು ಬಂದರು. ಈಗ ಮೊದಲ ಬ್ಯಾಚ್‍ನಲ್ಲಿದ್ದ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಮಧ್ಯರಾತ್ರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. 2ನೇ ಬ್ಯಾಚ್‍ನಲ್ಲಿದ್ದ 72 ಮಂದಿಯಲ್ಲಿ 3 ಜನಕ್ಕೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಕೂಡ ನನ್ನ ಬಳಿ ಮಾಹಿತಿ ಇದೆ. ಈ ಮೂವರನ್ನೂ ಕೂಡ ಜೈಲಿನಿಂದ ಆಸ್ಪತ್ರೆಗೆ ಪ್ರಚಾರ ಆಗದಂತೆ ಶಿಫ್ಟ್ ಮಾಡಬೇಕು ಎಂದು ನೋಡುತ್ತಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಹೇಳುತ್ತಿದ್ದೇನೆ, ಇಂತಹ ಸನ್ನಿವೇಷವನ್ನ ರಾಜಕಾರಣಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಹೇಳಿದರು.

ಇಂದು ಕೂಡ ನಾನು ಸಿಎಂ ಹಾಗೂ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಈ ಆರೋಪಿಗಳನ್ನು ರಾಮನಗರದಿಂದ ಮತ್ತೆ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತೆ, ಅಲ್ಲಿ ಹಜ್ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದಿದ್ದಾರೆ. ಅಧಿಕಾರಿಗಳು ಆರೋಪಿಗಳನ್ನು ಕರೆತರುವಾಗ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಕರೆದುಕೊಂಡು ಬಂದಿದ್ದಾರೆ. ಇದರಲ್ಲಿ ಅಧಿಕಾರಿಗಳ ಲೋಪವಿದೆ. ಹೀಗಾಗಿ ರಾಮನಗರದಿಂದ ಬೆಂಗಳೂರಿಗೆ ಶಿಫ್ಟ್ ಮಾಡುವಾಗಲಾದರೂ ವೈದ್ಯರ ಸಲಹೆಗಳನ್ನು ಪಡೆದು ಸಿಬ್ಬಂದಿ, ಅಧಿಕಾರಿಗಳಿಗೆ ಸೋಂಕು ತಗುಲದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಸಿಟ್ಟು ಯಾಕೆ..?
ನಾನು ಸಿಎಂ ಆಗಿದ್ದಾಗ ಎಡಿಜಿಪಿ ಅಲೋಕ್ ಮೋಹನ್ ಅವರು ಬೆಂಗಳೂರಿನ ಸಿಟಿ ಕಮಿಷನರ್ ಆಗಬೇಕೆಂದು ಎರಡು ಮೂರು ಬಾರಿ ನನ್ನ ಬಳಿ ಬಂದಿದ್ದರು. ಆಗ ನಾನು ಅವರಿಗೆ ಸ್ಪಂದನೆ ಮಾಡಿರಲಿಲ್ಲ. ಹೀಗಾಗಿ ಅವರಿಗೆ ನನ್ನ ಮೇಲಿದ್ದ ಸಿಟ್ಟನ್ನು ನನ್ನ ಜಿಲ್ಲೆಯ ಜನರ ಮೇಲೆ ತೋರಿಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಯಾಕೆ ಅವರು ರಾಮನಗರ ಜೈಲನ್ನೇ ಆರಿಸಿ, ಆರೋಪಿಗಳನ್ನು ಅಲ್ಲಿಗೇ ಶಿಫ್ಟ್ ಮಾಡಿ ಎಂದರು? ನಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಅವರು ಮಾತ್ರ ಒತ್ತಡ ಹಾಕಿ ರಾಮನಗರ ಜೈಲಿಗೇ ಆರೋಪಿಗಳನ್ನು ಶಿಫ್ಟ್ ಮಾಡಿದರು. ಇದೆಲ್ಲಾ ಕಾಕತಾಳಿಯ ಇರಬಹುದು. ಆದರೆ ಇಂದು ಬೆಳಗ್ಗೆ ಅವರು ನಡೆದುಕೊಂಡ ರೀತಿ ನೋಡಿದರೆ ಅನುಮಾನ ಹೆಚ್ಚಾಗುತ್ತಿದೆ. ಗೃಹ ಸಚಿವರು ಗುರುವಾರ ರಾತ್ರಿಯೇ ಆರೋಪಿಗಳನ್ನು ಶಿಫ್ಟ್ ಮಾಡುತ್ತೇವೆ ಎಂದಿದ್ದರು. ಇತ್ತ ಬೆಳಗ್ಗೆ ಸ್ಥಳೀಯ ಅಧಿಕಾರಿಗಳು ಜೈಲಿನ ಮುಂದೆ ಬಸ್ಸುಗಳನ್ನು ತಂದು ಆರೋಪಿಗಳನ್ನು ಶಿಫ್ಟ್ ಮಾಡಲು ಮುಂದಾದಾಗ, ಎಡಿಜಿಪಿ ಅವರು ಅವರ ಮೇಲೆ ತಮ್ಮ ಅಧಿಕಾರ ಪ್ರಯೋಗ ಮಾಡಿದ್ದಾರೆ. ಶಿಫ್ಟ್ ಮಾಡಲು ನಾನು ಅನುಮತಿ ಕೊಡಬೇಕು. ಯಾರ ಅನುಮತಿ ಪಡೆದು ಶಿಫ್ಟ್ ಮಾಡಲು ನಿರ್ಧಾರ ತೆಗೆದುಕೊಂಡಿರಿ ಎಂದು ಎಡಿಜಿಪಿ ರೇಗಾಡಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಯೇ ನೇರ ಹೊಣೆ:
ನನ್ನ ಮೇಲಿನ ಸಿಟ್ಟಿಗೆ ಎಡಿಜಿಪಿ ರಾಮನಗರ ಜನತೆಯ ಜೀವದ ಜೊತೆ ಚೆಲ್ಲಾಟ ಆಡಿದ್ದು ಸರಿಯಲ್ಲ. ಅಧಿಕಾರಿಯ ಉದ್ಧಟತನಕ್ಕೆ ಜೈಲಿನ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಸ್ಥಿತಿ ಏನಾಗಬೇಡ? ನನ್ನ ಮೇಲಿನ ಸಿಟ್ಟಿಗೆ ಹೀಗೆ ಮಾಡಿದ್ದಾರೆ ಎನಿಸುತ್ತಿದೆ. ಪಾದರಾಯನಪುರ ಆರೋಪಿಗಳನ್ನು ರಾಮನಗಕ್ಕೆ ಶಿಫ್ಟ್ ಮಾಡಿದಾಗಲೇ ನಾನು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ. ನನ್ನ ಜಿಲ್ಲೆಯ ಜನರಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರ ಹಾಗೂ ಈ ಸಲಹೆ ಕೊಟ್ಟ ಅಧಿಕಾರಿಯೇ ನೇರ ಹೊಣೆ ಹೊರಬೇಕು ಎಂದಿದ್ದೆ. ನನ್ನ ಪ್ರಕಾರ ಈ ವಿಚಾರದಲ್ಲಿ ಸರ್ಕಾರದ ದಾರಿ ತಪ್ಪಿಸಲಾಗಿದೆ. ಅಧಿಕಾರಿ ಹೇಳಿದ ತಕ್ಷಣ ಸರ್ಕಾರ ಇದಕ್ಕೆ ಒಪ್ಪಿಗೆ ಕೊಡಬಾರದಾಗಿತ್ತು. ನಾವು ಹೇಳಿದ ರೀತಿ ಕೆಲಸ ಮಾಡಿ ಎಂದು ಸರ್ಕಾರ ಎಚ್ಚರಿಕೆ ಕೊಟ್ಟು ಕೆಲಸ ಮಾಡಿಸಬೇಕಿತ್ತು. ಹೀಗಾಗಿ ಸರ್ಕಾರದಿಂದಲೂ ಲೋಪ ಆಗಿದೆ ಎಂದು ಕಿಡಿಕಾಡಿದರು.

ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡುತ್ತಾರೆ ಎಂದಾಗಲೇ ರಾಮನಗರದ ಹಲವು ಮಂದಿ ನನಗೆ ಬೆಳಗ್ಗೆಯಿಂದಲೇ ಕರೆ ಮಾಡುತ್ತಾ ಹೆದ್ದಾರಿಯಲ್ಲೇ ವಾಹನಗಳನ್ನು ತಡೆಯುತ್ತೇವೆ ಅನುಮತಿ ಕೊಡಿ ಎಂದು ಕೇಳಿಕೊಂಡಿದ್ದರು. ಆಗ ನಾನು ಕಾರ್ಯಕರ್ತರಿಗೆ ಹಾಗೂ ಜನರಿಗೆ ಹಾಗೆ ಮಾಡಬೇಡಿ ಎಂದಿದ್ದೆ. ನಾನು ಸಿಎಂ ಜೊತೆ ಮಾತನಾಡಿದ್ದೇನೆ. ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ರಸ್ತೆಯಲ್ಲಿ ಗಲಾಟೆ ಮಾಡಿಕೊಳ್ಳಲು ಹೋಗಬೇಡಿ ಎಂದು ಮನವಿ ಮಾಡಿದ್ದೆ. ಇಷ್ಟೆಲ್ಲ ಆದ ನಂತರವೂ ಈ ಘಟನೆ ನಡೆದು ಹೋಗಿದೆ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.

ಇಲ್ಲಿಯವರೆಗೆ ನಾನೆಂದೂ ಸರ್ಕಾರಕ್ಕೆ ಮುಜುಗರ ತರುವಂತೆ ರಾಜಕೀಯ ಮಾಡಿಲ್ಲ. ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಕೊರೊನಾ ಸೋಂಕಿತರು ಇದ್ದಾರೆ ಎಂದು ಗೊತ್ತಿದ್ದರೂ ಯಾಕೆ ಅವರು ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡಿದರು? ಸಲಹೆ ಕೊಟ್ಟವರು ಯಾರು? ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ 1,500 ಬೆಡ್‍ಗಳಲ್ಲಿ ಈ 120 ಆರೋಪಿಗಳನ್ನು ಇರಿಸಲು ಆಗುತ್ತಿರಲಿಲ್ಲವಾ? ರಾಮನಗರಕ್ಕೇ ಯಾಕೆ ಕರೆತಂದಿರಿ? ಸೋಂಕು ಇಲ್ಲದೇ ರಾಮನಗರದ ಜನ ಶಾಂತ ರೀತಿಯಿಂದ ಇದ್ದಾರೆ. ಆದರೆ ಇಂದು ಈ ಘಟನೆಯಿಂದ ಜನರನ್ನು ಆತಂಕಕ್ಕೀಡು ಮಾಡಿದ್ದೀರಿ. ಜನರ ಜೊತೆಗೆ ಅಧಿಕಾರಿಗಳೇ ಹೆದರಿ ಹೋಗಿದ್ದಾರೆ. ಈ ಪರಿಸ್ಥಿತಿಗೆ ಕಾರಣ ನೀವೇ ತಾನೆ? ಹೀಗೆ ಮಾಡೋದಾಗಿದ್ದರೇ 1 ತಿಂಗಳು ಯಾವ ಪುರುಷಾರ್ಥಕ್ಕೆ ನೀವು ಲಾಕ್‍ಡೌನ್ ಮಾಡಿದ್ದು? ಜನ ನಿಮ್ಮ ಮಾತು ಕೇಳಿದಕ್ಕೆ ಈ ರೀತಿ ವಾತಾವರಣ ಸೃಷ್ಟಿಸಿದ್ದೀರಾ? ಎಂದು ಗೃಹ ಸಚಿವರಿಗೆ ಹೆಚ್‍ಡಿಕೆ ಪ್ರಶ್ನಿಸಿದರು.

ಪಾದರಾಯನಪುರ ಆರೋಪಿಗಳು ಬಿಟ್ಟರೆ ರಾಮನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳಿಲ್ಲ. ಆದರೆ ಈಗ ರಾಮನಗರದ ಜೈಲಿನ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಕೆಲವರು ಬಾಡಿಗೆ ಮನೆಯಲ್ಲಿದ್ದಾರೆ. ಅವರಿಗೆ ಮನೆ ಮಾಲೀಕರು ಮನೆಯನ್ನು ಖಾಲಿ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಒಂದು ವೇಳೆ ಈ ಅಧಿಕಾರಿಗಳು, ಸಿಬ್ಬಂದಿಗೆ ಸೋಂಕು ತಗುಲಿದರೆ ಇಡೀ ಜಿಲ್ಲೆಗೆ ಸಮಸ್ಯೆ ಪ್ರಾರಂಭವಾಗುತ್ತದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಕಿಡಿಕಾರಿದರು.

ನನ್ನ ಮಗನ ಮದುವೆಯನ್ನು ಸಾಮಾಜಿಕ ಅಂತರ ಕಾಯ್ದುಕೊಂಡು, ನಿಯಮಗಳನ್ನು ಪಾಲಿಕೊಂಡು, ನನ್ನ ತೋಟದ ಮನೆಯಲ್ಲಿ ಮಾಡಿದ್ದೇನೆ. ಆದರೆ ಕೆಲ ಮಾಧ್ಯಮಗಳಲ್ಲಿ ಇದು ತಪ್ಪು, ದೇವೇಗೌಡರನ್ನ ಬಂಧಿಸಿ ಎನ್ನುವ ರೀತಿ ಸುದ್ದಿ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಯಾವ ರೀತಿ ನಮ್ಮ ಕೆಲ ಸ್ನೇಹಿತರು ಹೇಳಿಕೆ ಕೊಟ್ಟರು. ಈಗ ಈ ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್ ಮಾಡಿರುವ ಬಗ್ಗೆ ಮಹಾನುಭಾವರು ಏನು ಹೇಳುತ್ತಾರೆ? ಯಾರನ್ನ ಹೊಣೆ ಮಾಡುತ್ತಾರೆ? ಯಾರನ್ನ ಜೈಲಿಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಧಾರವಾಡದಲ್ಲಿ ಸೌಂಡ್ ಮಾಡಿದ ಖಾಸಗಿ ಗನ್..

Spread the loveಮಧ್ಯರಾತ್ರಿ ಧಾರವಾಡದಲ್ಲಿ ಸೌಂಡ್ ಮಾಡಿದ ಖಾಸಗಿ ಗನ್……ಮುಂಜಾನೆ ಸ್ಥಳಕ್ಕೆ ಹು-ಧಾ ಕಮಿಷನರ್ ಭೇಟಿ ನೀಡಿ ಪರಿಶೀಲನೆ… ನಿನ್ನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ