ಗದಗ: ಅಕ್ರಮ ಮರಳುಗಾರಿಕೆ ವಿಚಾರವಾಗಿ ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಧ್ಯೆ ವಾಗ್ವಾದ ನಡೆಯಿತು. ‘ಇವತ್ತೇ ಉಸ್ತುವಾರಿ ಬದಲಾವಣೆ ಮಾಡಿಸಿ ನನಗೇನು ಅಭ್ಯಂತರವಿಲ್ಲ. ಆಸಕ್ತಿಯೂ ಇಲ್ಲ’ ಎಂದು ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಗರಂ ಆದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳನ್ನು ಎಸ್ ಪಿ ವಿವರಿಸಿದರು. ಕ್ರಮಗಳು ಮತ್ತಷ್ಟು ಬಿಗಿಯಾಗಲಿ ಎಂದು ಸಚಿವ ಬಿ.ಸಿ.ಪಾಟೀಲ ಸೂಚಿಸಿದರು.
ಅದಕ್ಕೆ ನಯವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ ರೋಣ ಶಾಸಕ ಕಳಕಪ್ಪ ಬಂಡಿ, ಹೀಗೆ ಎಲ್ಲ ಅಕ್ರಮ ಗಣಿಗಾರಿಕೆಯನ್ನು ತಡೆಯಿರಿ. ಲಾರಿಗಳಿವೆ ದುಪ್ಪಟ್ಟು ದಂಡ ಹಾಕಿ, ಅವರು ತಮ್ಮ ಬಂಗಾರ, ಒಡೆವೆ ಎಲ್ಲವನ್ನೂ ಕೊಟ್ಟು ಮನೆ ಸೇರಲಿ. ಮನೆ, ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಳ್ಳಲಿ. ರಸ್ತೆ ಕಾಮಗಾರಿಗಳಿಗೆ ಅಮೆರಿಕಾದಿಂದ ಮರಳು ಬರುತ್ತದೆ ಎಂದು ವ್ಯಂಗ್ಯವಾಡಿದರು.
ನೀವು ಆಗಾಗ ಬಂದು ಅಧಿಕಾರಿಗಳಿಗೆ ಈ ರೀತಿ ನಿರ್ದೇಶನ ನೀಡಿದರೆ, ಅಧಿಕಾರಿಗಳು ಅದನ್ನೇ ಜಾರಿಗೊಳಿಸುತ್ತಾರೆ. ಜನರಿಗೆ ಸ್ಥಳೀಯ ಜನಪ್ರತಿನಿಧಿಗಳು ಉತ್ತರ ನೀಡಬೇಕಾಗುತ್ತದೆ ಎಂದು ಶಾಸಕ ಬಂಡಿ ಅಸಮಾಧಾನ ವ್ಯಕ್ತಪಡಿಸಿದರು.