ಮೈಸೂರು, ಅ.7- ಇಂದು ವಿಶ್ವ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಕೋವಿಡ್‍ನ ಆಘಾತ ಯಾವುದೇ ದೇಶಕ್ಕೆ ಸೀಮಿತವಾಗಿಲ್ಲ. ವಿಶ್ವದ ಆರ್ಥಿಕ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಆದರೆ, ಭಾರತ ತನ್ನ ಪ್ರಗತಿಯ ಗತಿಯನ್ನು ಉಳಿಸಿಕೊಂಡು ಬರುತ್ತಿದೆ. ಇದು ಕಡಿಮೆ ಸಾಧನೆಯಲ್ಲ. ದೇಶ ಮತ್ತಷ್ಟು ಪ್ರಗತಿ ಸಾಸಲು ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಿ ಬಿಕ್ಕಟ್ಟಿನಿಂದ ಹೊರಬರಲು ಸಹಕರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆ ನೀಡಿದರು.
ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ನಮ್ಮಲ್ಲಿ ಅಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಅಭಿವೃದ್ಧಿಶೀಲ ದೇಶಕ್ಕೆ ವರದಾನವಾಗಿದೆ. ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತದೆ. ಯುವಜನಾಂಗ ದೇಶದ ಅಮೂಲ್ಯ ಸಂಪತ್ತಾಗಿದೆ. ಅವರ ಕ್ರಿಯಾಶೀಲತೆಯನ್ನು ಆಡಳಿತ ವರ್ಗ ಸದುಪಯೋಗಪಡಿಸಿಕೊಳ್ಳಬೇಕು. ಇದರ ಜತೆಗೆ ಮಾನವ ಸಂಪತ್ತು, ಯುವ ಜನಾಂಗ ನಮ್ಮ ಭಾರತೀಯ ಸಂಸ್ಕøತಿಯಿಂದ ದೂರ ಹೋಗದಂತೆ ನೋಡಬೇಕು. ದೇಶಾಭಿಮಾನ ಬೆಳೆಸಲು ಸಂಸ್ಕøತಿ ಭದ್ರವಾದ ತಳಪಾಯ ಹಾಕುತ್ತದೆ ಎಂದು ಪ್ರತಿಪಾದಿಸಿದರು.
ಪ್ರತಿಯೊಂದು ಧಾರ್ಮಿಕ ಆಚರಣೆ ಹಿಂದೆ ಮಹತ್ವದ ಸಂದೇಶವಿರುತ್ತದೆ. ಇಂದಿನ ದಸರಾ ಕೇವಲ ಧಾರ್ಮಿಕ ಆಚರಣೆಯಾಗಿಲ್ಲ. ಇದಕ್ಕೊಂದು ಸಾಂಸ್ಕøತಿಕ ಮಹತ್ವವಿದೆ. ದಸರಾವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳುವ ಅವಕಾಶ ಎಥೇಚ್ಛವಾಗಿದೆ. ದಸರಾ ಉತ್ಸವ ನೆಪ ಮಾಡಿಕೊಂಡು ನಮ್ಮ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ರೂಪಿಸಬಹುದು. ಅದರಲ್ಲೂ ಕುಶಲಕರ್ಮಿಗಳಿಗೆ ಇದೊಂದು ಸದಾವಕಾಶವಾಗುವುದರಲ್ಲಿ ಸಂಶಯವಿಲ್ಲ.
ಇಡೀ ಕರ್ನಾಟಕದ ಕುಶಲಕರ್ಮಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಬಹುದಾಗಿದೆ. ಪ್ಯಾಕೇಜ್ ರೀತಿಯಲ್ಲಿ ಸರ್ಕಾರ ರೂಪುರೇಷೆ ಸಿದ್ಧಪಡಿಸಿದ್ದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಬಹುದು. ದಸರಾ ನೋಡಲು ದೇಶ-ವಿದೇಶಗಳಿಂದ ರಾಜ್ಯಕ್ಕೆ ಬಂದರೆ ಅವರು ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪಿ, ಬಿಜಾಪುರ ಹಾಗೂ ಇನ್ನಿತರ ಸ್ಥಳಗಳನ್ನು ನೋಡಿ ಹೋಗುವಂತಹ ಯೋಜನೆ ರೂಪಿಸಬೇಕು. ಅನೇಕ ರಾಷ್ಟ್ರಗಳು ತಮ್ಮ ಆರ್ಥಿಕ ಕ್ಷೇತ್ರದಲ್ಲಿ ಸಂಪನ್ಮೂಲ ಸಂಗ್ರಹಕ್ಕೆ ಪ್ರವಾಸೋದ್ಯಮವನ್ನು ಪ್ರಮುಖ ಕ್ಷೇತ್ರವನ್ನಾಗಿಸಿಕೊಂಡಿವೆ ಎಂದು ಸಿಂಗಪೂರ್ ಅಭಿವೃದ್ಧಿಯನ್ನು ಈ ಸಂದರ್ಭದಲ್ಲಿ ಅವರು ವ್ಯಾಖ್ಯಾನಿಸಿದರು.
ಈಗ ಕೋವಿಡ್‍ನಿಂದಾಗಿ ಪ್ರವಾಸೋದ್ಯಮ ಕಳೆಗುಂದಿದ್ದರೂ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಅವರು ಹೇಳಿದರು.
ನಾಡಿನ ದಸರಾ ಹಬ್ಬದ ಪರಂಪರೆ ಬಗ್ಗೆ ಉಲ್ಲೇಖ ಮಾಡಿದ ಅವರು, ಮೈಸೂರು ದಸರಾ ಉತ್ಸವಕ್ಕೆ 800 ವರ್ಷಗಳ ಇತಿಹಾಸವಿದೆ. ವಿಜಯನಗರದ ಅರಸರು ಈ ದಸರಾ ಉತ್ಸವವನ್ನು ತಮ್ಮ ಶಕ್ತಿ ಪ್ರದರ್ಶನ, ವಿದೇಶಿಯರು ಭೇಟಿ ಮಾಡುವುದು, ಹೊಸ ದಿಗ್ವಿಜಯಕ್ಕೆ ಹೋಗಲು ಮುಹೂರ್ತ ನಿಗದಿ ಮಾಡಲು ಉಪಯೋಗಿಸಿಕೊಳ್ಳುತ್ತಿದ್ದರು.
ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಹಂಪಿಯಲ್ಲಿ ದಸರಾ ಆಚರಣೆಗಾಗಿ ಮಹಾನವಮಿ ದಿಬ್ಬವನ್ನು ನಿರ್ಮಿಸಲಾಗಿತ್ತು. ಅಲ್ಲಿ ನವರಾತ್ರಿ 10 ದಿನಗಳ ಕಾಲವೂ ಕ್ರೀಡೆ, ಸಾಹಸ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ವಿಜಯನಗರದ ದಸರಾ ಪರಂಪರೆಯನ್ನು ಅವರ ಉತ್ತರಾಕಾರಿಗಳಾದ ಮೈಸೂರು ಒಡೆಯರ ಸಂತತಿಯವರು ಮುಂದುವರೆಸಿಕೊಂಡು ಬಂದವರು.
ಕ್ರಿ.ಶ.1610ರಲ್ಲಿ ರಾಜ ಒಡೆಯರ್ ಅವರು ಶ್ರೀರಂಗಪಟ್ಟಣದಲ್ಲಿ ದಸರಾ ಆರಂಭಿಸಿದರು. ಈ ಅಂಬಾರಿಯನ್ನು ಸಹ ವಿಜಯನಗರದಿಂದಲೇ ಪಡೆದಿದ್ದರು. ಈ ಅಂಬಾರಿ ಮಹಾರಾಷ್ಟ್ರದ ದೇವಗಿರಿಯಿಂದ ವಿಜಯನಗರದವರೆಗೆ ಬಂದಿತ್ತು. ಇದಕ್ಕೆ ಎಂಟು ಶತಮಾನಗಳ ಇತಿಹಾಸವಿದೆ. 750 ಕೆಜಿ ಸ್ವರ್ಣ ಅಂಬಾರಿಯಲ್ಲಿ ವಿಜಯದಶಮಿಯಂದು ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಲಿದೆ ಎಂದರು.
ದಸರಾಕ್ಕೆ ಹೊಸ ರೂಪ ಕೊಟ್ಟ ಕೀರ್ತಿ ಮೈಸೂರಿನ ದಿವಾನರಿಗೆ ಸೇರುತ್ತದೆ. ದಿವಾನ್ ರಂಗಾಚಾರ್ಯರಿಂದ ಹಿಡಿದು ಪುಟ್ಟಣ್ಣ ಚಟ್ಟಿಯಾರ್ ತನಕ ಎಲ್ಲ ದಿವಾನರಿಗೂ ಮೈಸೂರು ಸಂಸ್ಥಾನದ ಪ್ರಗತಿಯ ಕೀರ್ತಿ ಸಲ್ಲುತ್ತದೆ. ದಸರಾ ಸಂದರ್ಭದಲ್ಲಿ ಪ್ರಜಾಪ್ರತಿನಿ ಸಭೆಯ ಅವೇಶನ ಮೈಸೂರಿನಲ್ಲಿ ನಡೆಯುತ್ತಿತ್ತು. ದಿವಾನರು ಸದಸ್ಯರ ಸಣ್ಣ ಸಣ್ಣ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದರು. ಆ ಕಾಲದಲ್ಲೇ ಶಾಲಾ-ಕಾಲೇಜು ಆಸ್ಪತ್ರೆಗಳಿದ್ದುದನ್ನು ನಾವು ನೋಡಬಹುದಾಗಿದೆ ಎಂದರು.
ಕೃಷ್ಣರಾಜಸಾಗರ ನಿರ್ಮಾಣದಲ್ಲಿ ಒಡೆಯರ್ ಮನೆತನದವರ ಉದಾರತೆಯನ್ನು ಎಸ್.ಎಂ.ಕೃಷ್ಣ ಸ್ಮರಿಸಿದರು. ನೀರಾವರಿ, ವಿದ್ಯುತ್, ಕೈಗಾರಿಕೆ, ಶಿಕ್ಷಣ ಹಾಗೂ ದುರ್ಬಲ ವರ್ಗದವರಿಗೆ ಮಿಲ್ಲರ್ ಹಿಂದುಳಿದ ವರ್ಗ ಮೊದಲ ಆಯೋಗದ ಮೂಲಕ ಅನುಕೂಲ ಮಾಡಿಕೊಟ್ಟ ಕೀರ್ತಿ ದೊರೆಗಳಿಗೆ ಸಲ್ಲುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ ಹಾಗೂ ಚರ್ಚೆಗೆ ಸಾಕಷ್ಟು ಅವಕಾಶವಿರುತ್ತದೆ. ಅದನ್ನು ಬಳಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿ ಪ್ರಗತಿಯತ್ತ ಸಾಗಬೇಕಿದೆ ಎಂದು ಕೃಷ್ಣ ಹೇಳಿದರು.