ಬೆಂಗಳೂರು, ಫೆ.9- ನಾನು ಕಾಂಗ್ರೆಸಿಗ, ಪಕ್ಷ ಏನು ಹೇಳುತ್ತದೋ ಅದಕ್ಕೆ ನಾನು ಬದ್ಧ. ಇತರ ಪಕ್ಷಗಳ ರಾಜಕೀಯ ಮುಖಂಡರೊಂದಿಗಿನ ಸಂಬಂಧ ನನ್ನ ವೈಯಕ್ತಿಕ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಕಳೆದ ತಿಂಗಳು ಜೆಡಿಎಸ್‍ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದ ಇಬ್ರಾಹಿಂ ಅವರು ಜೆಡಿಎಸ್ ಪಕ್ಷ ಸೇರಿದಲಿದ್ದಾರೆ ಎಂಬ ಮಾಹಿತಿಗಳು ಹರಿದಾಡಿದ್ದವು.
ಈ ಬಗ್ಗೆ ಕೆಲವು ನಾಯಕರು ಹೇಳಿಕೆ ಕೂಡ ನೀಡಿದ್ದರು. ಆದರೆ, ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಇಬ್ರಾಹಿಂ ಅವರು, ನಾನು ಕಾಂಗ್ರೆಸಿಗ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಲುತ್ತೇವೆ ಎಂದು ತಿಳಿದಿರುವಾಗ ಕಾಂಗ್ರೆಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಗೆಲ್ಲುವ ಸಂದರ್ಭದಲ್ಲಿ ಏಕೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ? ಇದು ನನಗೆ ತುಂಬು ನೋಂಟು ಮಾಡುತ್ತದೆ. ಈಗ ನಾನು ಕಾಂಗ್ರೆಸ್‍ನಲ್ಲಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದರು. ಯಾರದೋ ಬಣ್ಣವನ್ನು ಬಯಲು ಮಾಡಲು ಹೋಗಿ ನಾವೇಕೆ ನಮ್ಮ ಬಟ್ಟೆಯನ್ನು ಬಿಚ್ಚಿ ಬೆತ್ತಲಾಗಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇಬ್ರಾಹಿಂ ಪರೋಕ್ಷವಾಗಿ ಟಾಂಗ್ ನೀಡಿದರು.
ಜೆಡಿಎಸ್‍ನ ಜಾತ್ಯತೀತ ನಿಲುವು ಬಹಿರಂಗವಾಗಬೇಕೆಂಬ ಕಾರಣಕ್ಕಾಗಿ ಈ ಹಿಂದೆ ಸಭಾಪತಿಯಾಗಿದ್ದ ಪ್ರತಾಪ್‍ಚಂದ್ರಶೆಟ್ಟಿ ವಿರುದ್ಧ ಅವಿಶ್ವಾಸನಿರ್ಣಯ ಮಂಡನೆಯಾದರೂ ಕೂಡ ರಾಜೀನಾಮೆ ನೀಡಲು ಬಿಟ್ಟಿರಲಿಲ್ಲ. ಉಪಸಭಾಪತಿ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿತ್ತು. ಸಭಾಪತಿ ಸ್ಥಾನಕ್ಕೆ ನಡೆದ ಚುನಾಣೆಯಲ್ಲಿ ನಸೀರ್ ಅಹಮ್ಮದ್ ಅವರನ್ನು ಕಣಕ್ಕಿಳಿಸಲಾಯಿತು. ಹೀಗಾಗಿ ಅಸಮಾಧಾನ ವ್ಯಕ್ತಪಡಿಸಿದ ಇಬ್ರಾಹಿಂ, ಗೆಲ್ಲೋಕೆ ಬೇರೆಯವರು, ಸೋಲಲು ನಾವು ಬೇಕಾ ಎಂದು ಕಿಡಿಕಾರಿದ್ದಾರೆ.
 Laxmi News 24×7
Laxmi News 24×7
				 
		 
						
					