ಬೆಂಗಳೂರು: ರಿಯಲ್ ಎಸ್ಟೇಟ್ ಆಡಳಿತದ ಗುಂಗಿನಿಂದ ಹೊರಬಂದು, ಕೊನೆಗೂ “ಪ್ರಜಾಸೇವೆ” ನೆನಪಿಸಿಕೊಂಡ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದಗಳು ಎಂದು ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಕಳೆದ 3 ವರ್ಷಗಳಿಂದ ಜನಸಾಮಾನ್ಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಈಗ ಮಾಡುತ್ತಿರುವ ಈ ಕಾರ್ಯಕ್ರಮ ʻಬ್ರಾಂಡ್ ಬೆಂಗಳೂರು’ ಮಾದರಿಯ ಮತ್ತೊಂದು ಪ್ರಚಾರದ ಗಿಮಿಕ್ ಅಷ್ಟೇ ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ತಿಳಿದಿದೆ. ಕ್ಯಾಮೆರಾಗಳಿಗೆ ಪೋಸ್ ಕೊಡುವ ಮೊದಲು, ನಾಡಿನ ಈ ಜ್ವಲಂತ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಹಲವು ಪ್ರಶ್ನೆಗಳನ್ನು ಅವರು ಕೇಳಿದ್ದಾರೆ.
ಗೃಹಲಕ್ಷ್ಮಿ ಅನುದಾನ: ಮಾನ್ಯ ಹೈಕೋರ್ಟ್ ಗಮನ ಸೆಳೆದಿದ್ದರೂ, 1.2 ಕೋಟಿ ಫಲಾನುಭವಿ ಮಹಿಳೆಯರಿಗೆ ತಲುಪಬೇಕಾದ 5,000 ಕೋಟಿ ರೂ. ಹಣ ಎಲ್ಲಿದೆ?
ಶಕ್ತಿ ಯೋಜನೆಯ ಬಾಕಿ: ಸಾರಿಗೆ ನಿಗಮಗಳಿಗೆ ನೀಡಬೇಕಾದ 5,650 ಕೋಟಿ ರೂ. ಬಾಕಿ ಮೊತ್ತವನ್ನು ಬಿಡುಗಡೆ ಮಾಡದೆ, ಸಾರಿಗೆ ಸಂಸ್ಥೆಗಳನ್ನು ಕತ್ತಲಿಗೆ ತಳ್ಳಿದ್ದೀರಿ.
ಸಾಮಾಜಿಕ ಭದ್ರತಾ ಪಿಂಚಣಿ: ವಿಧವೆಯರು, ವೃದ್ಧರು ಹಾಗೂ ದಿವ್ಯಾಂಗರ 8 ತಿಂಗಳ ಮಾಸಾಶನವನ್ನು ತಡೆಹಿಡಿದಿರುವುದೇ ನಿಮ್ಮ “ಸಾಮಾಜಿಕ ನ್ಯಾಯವೇ”?
ರೈತರ ಹಿತಬಲಿ: ಬರಪೀಡಿತ ರೈತರಿಗೆ ಸೂಕ್ತ ಪರಿಹಾರ ತಲುಪಿಲ್ಲ. ಇತ್ತ ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸಿ ರೈತರು 600ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಅಭಿವೃದ್ಧಿ ಶೂನ್ಯ: ಬೆಂಗಳೂರಿನ ಮಾರಣಾಂತಿಕ ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ, ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನವನ್ನೂ ಸಂಪೂರ್ಣವಾಗಿ ತಡೆಹಿಡಿಯಲಾಗಿದೆ.
ಪ್ರಚಾರಕ್ಕಷ್ಟೇ ಸೀಮಿತವಾದ ಆಡಳಿತವನ್ನು ಬಿಟ್ಟು, ಜನಪರ ಆಡಳಿತ ನೀಡಿ. ‘ಸೂಪರ್ ಸಿಎಂ’ ಸುರ್ಜೇವಾಲ ಅವರೇ, ನಿಮ್ಮ ಸರ್ಕಾರಕ್ಕೆ ತಕ್ಷಣವೇ ಸೂಕ್ತ ನಿರ್ದೇಶನ ನೀಡಿ, ರಾಜ್ಯದ ಜನರ ಕಷ್ಟಗಳಿಗೆ ಸ್ಪಂದಿಸುವಂತೆ ಮಾಡಿ ಎಂದು ಕುಟುಕಿದ್ದಾರೆ
Laxmi News 24×7