ಲಕ್ನೋ: ಮಹಾರಾಷ್ಟ್ರ ಮತ್ತು ಪಶ್ಚಿಮಬಂಗಾಳ ರಾಜಕೀಯವನ್ನು ಮರೆತು ಬಿಡಿ. ಸಮಾಜವಾದಿ ಪಕ್ಷದಲ್ಲಿ ಶೀಘ್ರದಲ್ಲೇ ಒಡಕು ಉಂಟಾಗಲಿದೆ. ಇಡೀ ಸಮಾಜವಾದಿ ಪಕ್ಷವೇ ಭಾರತೀಯ ಜನತಾ ಪಕ್ಷ ಸೇರಲು ಸಿದ್ಧವಾಗಿ ಕುಳಿತಿದೆ ಎಂದು ರಾಜ್ಯ ಸಚಿವ ಹಾಗೂ ಎಸ್‌ಬಿಎಸ್‌ಪಿ (ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ) ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಸಮಾಜವಾದಿ ಪಕ್ಷ ವಿಭಜನೆಯಾಗಲಿದ್ದು, ಪಕ್ಷದ ಪ್ರಮುಖ ನಾಯಕರಾದ ರಾಮ್ ಗೋಪಾಲ್ ಯಾದವ್ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆದ ಗಣಿಗಾರಿಕೆ ಹಗರಣ ಮತ್ತು ಗೋಮತಿ ರಿವರ್ ಫ್ರಂಟ್ ಹಗರಣದ ಹಿಂದಿರುವ ಅಸಲಿ ಮಾಸ್ಟರ್‌ಮೈಂಡ್ ಯಾರು ಎಂಬುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ತನಿಖಾ ಸಂಸ್ಥೆಗಳ ಉರುಳು ಬಿಗಿಯಾಗುತ್ತಿದ್ದಂತೆ ಸಮಾಜವಾದಿ ಪಕ್ಷದಲ್ಲಿನ ಆತಂಕ ಹೆಚ್ಚಾಗುತ್ತಿದೆ ಎಂದು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಿಂದಾಗಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ ರಾಜ್‌ಭರ್ ನೀಡಿರುವ ಈ ಹೇಳಿಕೆ ಭಾರೀ ಕುತೂಹಲ ಕೆರಳಿಸಿದೆ.
ರಾಜ್‌ಭರ್ ಅವರ ಈ ಹೇಳಿಕೆಗೆ ಸಮಾಜವಾದಿ ಪಕ್ಷ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸಮಾಜವಾದಿ ಪಕ್ಷದ ಬೆಳವಣಿಗೆಯನ್ನು ನೋಡಿ ಬೆದರಿವೆ. ಹಾಗಾಗಿ ಜನರ ಗಮನ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿಎಸ್‌ಪಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಬಲವನ್ನು ಅರ್ಧಕ್ಕೆ ಕುಗ್ಗಿಸಿದೆ. ಮುಂಬರುವ 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಿಂದ ಸಂಪೂರ್ಣವಾಗಿ ಕಿತ್ತೊಗೆಯುತ್ತೇವೆ. ಮುಂಬರುವ ಚುನಾವಣೆಯಲ್ಲಿ ರಾಜ್‌ಭರ್ ಪಕ್ಷದ ಒಬ್ಬೇ ಒಬ್ಬ ಶಾಸಕನೂ ಗೆಲ್ಲುವುದಿಲ್ಲ ಮತ್ತು ಅವರು ಕೇವಲ ಪ್ರಚಾರಕ್ಕಾಗಿ ಇಂತಹ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರು ಲಂಡನ್ ಮತ್ತು ಪ್ಯಾರಿಸ್‌ಗೆ ಭೇಟಿ ನೀಡುವ ಬದಲು ಕಾಶಿ, ಅಯೋಧ್ಯೆ, ಮಥುರಾ, ನೈಮಿಶಾರಣ್ಯ ಅಥವಾ ವಿಂಧ್ಯವಾಸಿನಿ ದೇವಸ್ಥಾನಗಳಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬೇಕಿತ್ತು. ಇಂತಹ ಸ್ಥಳಗಳಿಗೆ ಭೇಟಿ ನೀಡುವುದರಿಂದ ಉತ್ತರ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುತ್ತಿತ್ತು ಮತ್ತು ಸ್ಥಳೀಯ ವ್ಯಾಪಾರಿಗಳು, ಹೂ ಮಾರುವವರು, ಸಿಹಿ ತಿಂಡಿ ಅಂಗಡಿಯವರು, ಸಣ್ಣ ಹೋಟೆಲ್ ಮಾಲೀಕರು ಮತ್ತು ಸಾರಿಗೆ ವಲಯದ ಜನರಿಗೆ ಆರ್ಥಿಕವಾಗಿ ಲಾಭವಾಗುತ್ತಿತ್ತು. ಅಖಿಲೇಶ್ ಯಾದವ್ ಅವರಿಗೆ ಉತ್ತರ ಪ್ರದೇಶದ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದಕ್ಕಿಂತ ಲಂಡನ್ ಮತ್ತು ಪ್ಯಾರಿಸ್‌ನಂತಹ ವಿದೇಶಿ ಪ್ರವಾಸಿ ತಾಣಗಳೇ ಹೆಚ್ಚು ಇಷ್ಟವಾಗುತ್ತವೆ ಎಂದು ರಾಜ್‌ಭರ್ ವಾಗ್ದಾಳಿ ನಡೆಸಿದ್ದರು.
Laxmi News 24×7