“ಅನುಮಾನ ಅನ್ನೋದು ಸೆರಗಿಗೆ ಕಟ್ಕೊಂಡ ಕೆಂಡ ಇದ್ದಂತೆ.. ಅದು ಸುಡೋಕೆ ಶುರು ಮಾಡಿದ್ರೆ ಇಡೀ ಸಂಸಾರವೇ ಬೂದಿಯಾಗುತ್ತೆ!”
ಮೈಸೂರಿನ ಹಳೆ ಕೆಸರೆಯಲ್ಲಿ ನಡೆದ ಈ ಘೋರ ಹತ್ಯೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಮದುವೆಯಾದ ಕೇವಲ ಒಂದೂವರೆ ವರ್ಷಕ್ಕೆ, ತನ್ನ ಪತಿಯೇ ತನ್ನ ಪ್ರಾಣದಾತನಾಗಬೇಕಿದ್ದವನು ಯಮನಾಗಿ ಅಟ್ಟಹಾಸ ಮೆರೆದಿದ್ದಾನೆ.
ಮದುವೆ ಮಂಟಪದಲ್ಲಿ ‘ರಾಮ’.. ಮನೆಯೊಳಗೆ ಸೇರಿದ ಮೇಲೆ ‘ಕುಡುಕ’ ರಾಕ್ಷಸ!
ಒಂದೂವರೆ ವರ್ಷದ ಹಿಂದೆ ಪುಷ್ಪ ಎಂಬ ಸುಂದರ ಯುವತಿಯನ್ನು ಮಹೇಶ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. “ನಮ್ಮ ಹುಡುಗ ಚಿನ್ನದಂಥವನು, ಚಟಗಳೇ ಇಲ್ಲ” ಎಂದು ನಂಬಿಸಿ ಮದುವೆ ಮಾಡಿದ್ದ ಗಂಡನ ಮನೆಯವರು, ಅವನೆಂತಹ ದೊಡ್ಡ ಕುಡುಕ ಎಂಬುದನ್ನು ಮುಚ್ಚಿಟ್ಟಿದ್ದರು. ಮದುವೆಯಾದ ನಂತರ ಮಹೇಶನ ಅಸಲಿ ಬಣ್ಣ ಬಯಲಾಗಿತ್ತು. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾ ಸಂಸಾರ ಸರಿದೂಗಿಸುತ್ತಿದ್ದ ಪುಷ್ಪಾಗೆ ಪ್ರತಿದಿನ ನರಕ ದರ್ಶನವಾಗುತ್ತಿತ್ತು.
ಓಲೆಯ ವಿಚಾರಕ್ಕೆ ಶುರುವಾದ ಜಗಳ.. ಕುಡುಗೋಲಿಗೆ ಬಲಿಯಾದ ಜೀವ!
ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹೇಶನಿಗೆ ಹೆಂಡತಿಯ ಮೇಲೆ ಅತೀವವಾದ ಅನುಮಾನ. ಸದಾ ಅನುಮಾನದ ದೃಷ್ಟಿಯಿಂದಲೇ ಪುಷ್ಪಾಳನ್ನು ನೋಡುತ್ತಿದ್ದ ಈತ, ಇತ್ತೀಚೆಗೆ ಆಕೆಯ ಚಿನ್ನದ ಓಲೆಯನ್ನು ಕಿತ್ತುಕೊಂಡಿದ್ದ. “ನಮ್ಮ ಅಜ್ಜಿ ಪ್ರೀತಿಯಿಂದ ಕೊಟ್ಟ ಓಲೆ ಎಲ್ಲಿ?” ಎಂದು ಪುಷ್ಪ ಕೇಳಿದ್ದೇ ಅವಳ ಪಾಲಿಗೆ ಮೃತ್ಯುವಾಯಿತು.
ಅಣ್ಣನಿಗೆ ಮಾಡಿದ ಆ ಕಡೆಯ ಫೋನ್ ಕಾಲ್!
ಸಾವಿಗೂ ಮುನ್ನ ಅಂದರೆ ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಪುಷ್ಪ ತನ್ನ ಅಣ್ಣ ಪುರುಷೋತ್ತಮ್‌ಗೆ ಫೋನ್ ಮಾಡಿ ಅಳುತ್ತಾ ಹೇಳಿದ್ದಳು, “ಅಣ್ಣಾ, ಈತ ತುಂಬಾ ಗಲಾಟೆ ಮಾಡ್ತಿದ್ದಾನೆ, ನನಗೆ ಭಯವಾಗ್ತಿದೆ” ಎಂದು. “ತಂಗಿ ಸುಮ್ಮನಿರು, ಬೆಳಿಗ್ಗೆ ನಮ್ಮ ಮನೆಗೆ ಬಂದು ಬಿಡು” ಎಂದು ಅಣ್ಣ ಸಮಾಧಾನ ಮಾಡಿದ್ದ. ಆದರೆ ಆ ಬೆಳಗನ್ನು ನೋಡಲು ಪುಷ್ಪ ಬದುಕಿರಲಿಲ್ಲ. ರಣರಾಕ್ಷಸನಾದ ಮಹೇಶ ಕುಡುಗೋಲಿಂದ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಪೊಲೀಸ್ ಠಾಣೆಗೆ ತೆರಳಿ ಶರಣಾದ ಹಂತಕರು!
ಕೃತ್ಯ ಎಸಗಿದ ನಂತರ ಮಹೇಶ, ಆತನ ತಾಯಿ, ಅಕ್ಕ ಮತ್ತು ಭಾವ ಎಲ್ಲರೂ ಎನ್.ಆರ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಕುಡುಕ ಗಂಡನ ಸಂಶಯದ ಬೆಂಕಿಯಲ್ಲಿ ಒಬ್ಬ ಅಮಾಯಕಿ ಸುಟ್ಟು ಕರಕಲಾಗಿದ್ದಾಳೆ.
ಸಂಬಂಧಗಳ ಮಧ್ಯೆ ಪ್ರೀತಿ ಇರಲಿ, ಅನುಮಾನವಲ್ಲ. ಸಂಶಯದ ಹಾದಿ ಎಂದು ನೆಮ್ಮದಿ ನೀಡುವುದಿಲ್ಲ ಎಂಬುದಕ್ಕೆ ಈ ಕಥೆಯೇ ಸಾಕ್ಷಿ.
Laxmi News 24×7