ಚಿಕ್ಕೋಡಿ: ನಾಗರಮುನ್ನೋಳಿ ಹೋಬಳಿಯ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಅವಶ್ಯವಿದ್ದಲ್ಲಿ ಕೊಳವೆಬಾವಿ ಇನ್ನುಳಿದೆಡೆ ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಸಬೇಕು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕೋಡಿ ಪಟ್ಟಣದ ಮಿನಿವಿಧಾನಸೌಧದ ಸಭಾಭವನದಲ್ಲಿ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಹವಾಮಾನ ವೈಪರಿತ್ಯ ಕುರಿತು ಕರೆದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೋಬಳಿ ವ್ಯಾಪ್ತಿಯ ಜೈನಾಪೂರ ಹಾಗೂ ನಾಗರಮುನ್ನೋಳಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು. ಹೆಸ್ಕಾಂ ಅಧಿಕಾರಿಗಳ ವಿದ್ಯುತ್ ಪರಿವರ್ತಕಗಳ ದಾಸ್ತಾನು ಹೊಂದಬೇಕು ಎಂದರು.
ಕೊಟಬಾಗಿ ಏತ ನೀರಾವರಿ ಯೋಜನೆಯ ಜಾಕವೆಲ್ ರಿಪೇರಿ ಮಾಡಿ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಕಾಲುವೆ ಮೂಲಕ ನೀರು ಪೂರೈಕೆ ವ್ಯವಸ್ಥೆಯಾಗಬೇಕು. ಅಪೂರ್ಣಗೊಂಡ ಜಲಜೀವನ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಟ್ಯಾಂಕರ್ ಮೂಲಕ ನೀರು ಪೂರೈಕೆಗೂ ಮೊದಲು ಟ್ಯಾಂಕರ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯಲ್ಲಿ ಮಮದಾಪೂರ ಮೀರಾಪೂರಹಟ್ಟಿ, ಚನ್ಯಾನದಡ್ಡಿ, ಖಜಗೌನಡನಟ್ಟಿ, ಉಮರಾಣಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ನೀರಿನ ಸಮಸ್ಯೆ ತಲೆತೋರಿದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕಾದ ಅವಶ್ಯಕತೆ ಇದೆ. ಕೆಲವೊಂದು ತೋಟದ ವಸತಿ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ತಲೆ ತೋರಿದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಕುಡಿಯುವ ನೀರು ಪೂರೈಕೆ ಸಮಸ್ಯೆ ನಿವಾರಣೆ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿ ಹೊರಬೇಕು ಹಾಗೂ ಪಂಚಾಯಿತಿ ಎಂದು ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗರಾವ್, ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯದ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ ಆರ್ ಜಂಬಗಿ, ತಾಂತ್ರಿಕ ಸಹಾಯಕ ಮಹಾಂತೇಶ ಹಿಂಗ್ಲಜೆ, ನರೇಗಾ ವಿಭಾಗದ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಇದ್ದರು.
Laxmi News 24×7