ಮುಂಬೈ: ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಎಂಬ ಆದೇಶಕ್ಕೆ ಮಹಾರಾಷ್ಟ್ರ ಸರ್ಕಾರ 6 ತಿಂಗಳ ಬ್ರೇಕ್ ಹಾಕಿದೆ.
ಇತ್ತೀಚಿಗಷ್ಟೇ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮೇ.1ರಿಂದ ಮಹಾರಾಷ್ಟ್ರದಲ್ಲಿ ಎಲ್ಲಾ ಪರವಾನಗಿ ಪಡೆದ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಮಾತನಾಡುವುದು ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಈ ಸಂಬಂಧ ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಪ್ರತಾಪ್ ಸರ್ನಾಯಕ್ ಅವರಿಗೆ ಪತ್ರ ಬರೆದಿದ್ದು, ಆರು ತಿಂಗಳಿಂದ ಒಂದು ವರ್ಷದವರೆಗೆ ಮುಂದೂಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮರಾಠಿ ಮಹಾರಾಷ್ಟ್ರದ ಗುರುತು ಮತ್ತು ಹೆಮ್ಮೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಯಾವುದೇ ಭಾಷೆಯನ್ನು ತಿಳಿದುಕೊಳ್ಳಬೇಕೆಂದರೆ ಅದು ಒಬ್ಬ ವ್ಯಕ್ತಿಯ ಕಲಿಯುವ ಮತ್ತು ಗ್ರಹಿಸುವ ಸಾಮರ್ಥ್ಯದ ಮೇಲೆ ಅವಲಂಬಿಸಿರುತ್ತದೆ. ಆದರೆ ಮರಾಠಿ ಕಡ್ಡಾಯ ಆದೇಶ ಅಶಾಂತಿಯನ್ನು ಸೃಷ್ಟಿಸಿದೆ. ಹೀಗಾಗಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯಗೊಳಿಸುವ ಯೋಜನೆಯನ್ನು ಆರು ತಿಂಗಳಿಂದ ಒಂದು ವರ್ಷದೊಳಗೆ ಜಾರಿಗೆ ತರಲು ನಾನು ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಆದೇಶ ಜಾರಿ ಮುಂದೂಡುವುದರಿಂದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಲಿಯಲು ಅಗತ್ಯವಾದ ಸಮಯವನ್ನು ನೀಡುತ್ತದೆ. ಮರಾಠಿ ಕಲಿಯಲು ಆಟೋ ಮತ್ತು ಟ್ಯಾಕ್ಸಿ ಚಾಲಕರಿಂದ ಯಾವುದೇ ವಿರೋಧವಿಲ್ಲ, ಆದರೆ ಅವರಿಗೆ ಸ್ವಲ್ಪ ಸಮಯ ನೀಡಬೇಕು. ಪ್ರೀತಿಯಿಂದ ಕಲಿಸುವ ಭಾಷೆ ಉಳಿಯುತ್ತದೆ, ಆದರೆ ಈ ರೀತಿ ಜಾರಿಗೊಳಿಸಲಾದ ಭಾಷೆ ಭಯವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೇ ರಾಜ್ಯದ ಎಲ್ಲಾ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಚಾಲಕರು ಕಡ್ಡಾಯವಾಗಿ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು, ಇಲ್ಲದಿದ್ದರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಈ ನಿಯಮವನ್ನು ಮಹಾರಾಷ್ಟ್ರ ದಿನವಾದ ಮೇ 1 ರಿಂದ ರಾಜ್ಯಾದ್ಯಂತ ಕಡ್ಡಾಯವಾಗಿ ಜಾರಿಗೊಳಿಸುವುದಾಗಿ ತಿಳಿಸಿದ್ದರು.
Laxmi News 24×7