ಬೆಳಗಾವಿ : ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ, ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ಮಾಡಿದ ಇತಿಹಾಸ ಕಾಂಗ್ರೆಸ್ ನದ್ದು. ಆದರೆ ಭಾರತೀಯ ಜನತಾ ಪಾರ್ಟಿ ಮಹಿಳಾ ಮೀಸಲಾತಿ ವಿಷಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಮಹಿಳಾ ಪ್ರಧಾನಿ (ಇಂದಿರಾ ಗಾಂಧಿ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ರಾಷ್ಟ್ರಪತಿ (ಪ್ರತಿಭಾ ಪಾಟೀಲ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಮುಖ್ಯಮಂತ್ರಿ (ಸುಚೇತಾ ಕೃಪಾಲಿನಿ, 1963 ಉತ್ತರ ಪ್ರದೇಶ) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಮಂತ್ರಿ (ರಾಜಕುಮಾರಿ ಅಮೃತ ಕೌರ್, 1947) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ MP (ರಾಧಾಬಾಯಿ ಸುಬಾರಾಯನ್, 1952) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ MLA (ಮುತ್ತುಲಕ್ಷ್ಮೀ ರೆಡ್ಡಿ, 1927) ಮಾಡಿದ್ದು ಕಾಂಗ್ರೆಸ್, ಮೊದಲ ಮಹಿಳಾ ಪಂಚಾಯತ್ ಅಧ್ಯಕ್ಷೆ ಮಾಡಿದ್ದು ಕಾಂಗ್ರೆಸ್. ಇವೆಲ್ಲವೂ ಕಾಂಗ್ರೆಸ್ ನೀಡಿದ ಅವಕಾಶಗಳೇ. ಇದು ಮಹಿಳಾ ಪರ ನಿಲುವಿನ ಜೀವಂತ ಸಾಕ್ಷಿ. ನಮ್ಮ ಗ್ಯಾರಂಟ ಯೋಜನೆಗಳು ಸಹ ಮಹಿಳಾ ಸಬಲೀಕರಣದ ಪರವಾಗಿಯೇ ಇದೆ ಎಂದು ಹೇಳಿದರು.
ಇಂದು ಬಿಜೆಪಿ ನಮ್ಮ ಮೇಲೆ ಮಾಡುತ್ತಿರುವ “ಮಹಿಳಾ ವಿರೋಧಿ” ಎಂಬ ಆರೋಪ ಸಂಪೂರ್ಣ ಸುಳ್ಳು ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇದು ಪೂರ್ವಯೋಜಿತ. ಮಹಿಳಾ ಮೀಸಲಾತಿ ಜೊತೆಗೆ ಕ್ಷೇತ್ರ ವಿಂಗಡಣೆ ವಿಷಯವನ್ನೂ ಜೋಡಿಸಿದ್ದರಿಂದ ಸೋಲಾಯಿತು. ಬಿಜೆಪಿಗೆ ಸೋಲುವುದು ಮೊದಲೇ ಗೊತ್ತಿತ್ತು. ಹಾಗಾಗಿ ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ವ್ಯವಸ್ಥಿತಿ ಕುತಂತ್ರ ಮಾಡಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ. ನಾವು ವಿರೋಧಿಸಿದ್ದು ಅದನ್ನು ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ಜೊತೆ ಕಟ್ಟಿ ಹಾಕಿದ ವಿಧಾನ. ಮಹಿಳೆಯರಿಗೆ 33% ಮೀಸಲಾತಿ ನೀಡಬೇಕೆಂದಿದ್ದರೆ, ಅದನ್ನು ಈಗಿನ ಲೋಕಸಭಾ ಸ್ಥಾನಗಳಲ್ಲೇ ತಕ್ಷಣ ಜಾರಿಗೆ ತರಬಹುದಿತ್ತು. 2023ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಲೋಕಸಭೆಯಲ್ಲಿ ಪಾಸ್ ಆದಾಗ ಪ್ರಧಾನಿ ಮತ್ತು ಗೃಹ ಸಚಿವರು ಇದೊಂದು ಐತಿಹಾಸಿಕ ಬಿಲ್ ಎಂದು ಹೇಳಿ ಜಾರಿಗೊಳಿಸದಿರುವುದೇಕೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಉದ್ದೇಶಪೂರ್ವಕವಾಗಿ ಜನಗಣತಿ ಮತ್ತು ಕ್ಷೇತ್ರ ವಿಂಗಡಣೆ ಎಂಬ ಷರತ್ತುಗಳನ್ನು ಸೇರಿಸಿ ಅದನ್ನು ವಿಳಂಬಗೊಳಿಸಿದೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ಬೇರೆ ವಿಷಯ, ಕ್ಷೇತ್ರ ಮರುವಿಂಗಡಣೆ ಬೇರೆ ವಿಷಯ. ಈ ಎರಡನ್ನೂ ಒಟ್ಟಿಗೆ ಕಟ್ಟಿ ಮಸೂದೆ ತಂದು ಗೊಂದಲ ಸೃಷ್ಟಿಸಿರುವುದು ಬಿಜೆಪಿಯ ರಾಜಕೀಯ ಲೆಕ್ಕಾಚಾರ. ಹೀಗಾಗಿ ಮಸೂದೆ ಸೋಲಿಗೆ ಕಾರಣ ಕಾಂಗ್ರೆಸ್ ಅಲ್ಲ, ಅನಗತ್ಯ ಷರತ್ತುಗಳನ್ನು ಸೇರಿಸಿ ಅದನ್ನು ಸಂಕೀರ್ಣಗೊಳಿಸಿದ ಬಿಜೆಪಿ ಕ್ರಮವೇ ನಿಜವಾದ ಕಾರಣ. ಬಿಜೆಪಿಗೆ ನಿಜವಾಗಿಯೂ ಮಹಿಳಾ ಸಬಲೀಕರಣದ ಬಗ್ಗೆ ಕಾಳಜಿ ಇದ್ದರೆ, ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕಿತ್ತು. ಆದರೆ ಮಹಿಳೆಯರ ಹಕ್ಕನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗಿದೆ. ಕಾಂಗ್ರೆಸ್‌ನ ನಿಲುವು ಸ್ಪಷ್ಟ, ಮಹಿಳೆಯರಿಗೆ ತಕ್ಷಣ ನ್ಯಾಯ ಸಿಗಬೇಕು. ಮೀಸಲಾತಿ ಯಾವುದೇ ಷರತ್ತುಗಳಿಲ್ಲದೆ ಜಾರಿಯಾಗಬೇಕು ಎಂದು ಹೆಬ್ಬಾಳಕರ್ ಹೇಳಿದರು.
ಮಹಿಳಾ ಮೀಸಲಾತಿ ರಾಜಕೀಯ ಆಟದ ವಿಷಯವಲ್ಲ; ಅದು ಮಹಿಳೆಯರ ಹಕ್ಕಿನ ಪ್ರಶ್ನೆ. ಕಾಂಗ್ರೆಸ್ ಮಹಿಳೆಯರ ಪರ ನಿಂತಿತ್ತು, ನಿಂತಿದೆ, ಮುಂದೆಯೂ ನಿಂತೇ ಇರುತ್ತದೆ. ಸುಳ್ಳು ಪ್ರಚಾರದಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಆದರೆ ಬಿಜೆಪಿ ಕಾಂಗ್ರೆಸ್ ಮಹಿಳಾ ವಿರೋಧಿ ಎನ್ನುವ ರೀತಿ ಅಪಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಎಲ್ಲರಿಗೂ ಸಮಾನ ಹಕ್ಕು ಎನ್ನುವ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಮೇಲೆ ಸುಮ್ಮನೇ ಗೂಬೆ ಕೂರಿಸಲಾಗುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಿಜೆಪಿಯವರಿಗೆ ನಿಜವಾಗಿ ಕಾಳಜಿ ಇದ್ದಿದ್ದರೆ 2023 ರಲ್ಲಿ ಸಂಸತ್ ಅಂಗೀಕರಿಸಿದ ಸಂದರ್ಭದಲ್ಲೇ ಜಾರಿಗೊಳಿಸಬೇಕಿತ್ತು. ಆದರೆ ಈಗ ತಮಿಳುನಾಡಿನ, ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ತರಾತುರಿಯಲ್ಲಿ ಮಸೂದಗೆ ಮಂಡಿಸುವ ಅಗತ್ಯ ಏನಿತ್ತು? ವಿರೋಧ ಪಕ್ಷದ ಮುಖಂಡರ ಜೊತೆ ಚರ್ಚಿಸುವ ಬದಲು, ಮುಖ್ಯಮಂತ್ರಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸೋಲುವ ಕುರಿತು ಗೊತ್ತಿದ್ದೂ ಹಿಟ್ಲರ್ ಶಾಹಿಯಂತೆ ವರ್ತನೆ ಮಾಡಿದೆ ಎಂದು ಹೇಳಿದರು.
ನಾವು ಯಾವತ್ತೂ ಮಹಿಳಾ ಪರ. ನಮ್ಮ ಎಲ್ಲ ಯೋಜನೆಗಳೂ ಮಹಿಳಾಪರ. ಆದರೆ ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ. ಹತ್ರಾಸ್ ಘಟನೆ, ಮಣಿಪುರ ಘಟನೆ ಅವರ ಕಣ್ಣಿಗೆ ಏಕೆ ಕಾಣುತ್ತಿಲ್ಲ? ಈ ಎರಡೂ ಸಂದರ್ಭದಲ್ಲಿ ಅವರು ಹೇಗೆ ನಡೆದುಕೊಂಡರು? ಮಹಿಳಾ ಅಥ್ಲಿಟ್ ಗಳು ಎಷ್ಟು ಹಿಂಸೆ ಅನುಭವಿಸಿದರು? ಮಹಿಳೆಯನ್ನು ಮನೆಗೆ ಕಟ್ಟಿಹಾಕುವ ಮನುಸ್ಮೃತಿ ಮನೋಭಾವ ಬಿಜೆಪಿಯದ್ದು. ಬಹುಮತವಿಲ್ಲ ಎಂದು ಗೊತ್ತಿದ್ದರೂ ಮಂಡಿಸುವ ಮೂಲಕ ಆಟ ಆಡುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಕೆಟ್ಟದಾಗಿ ಬಿಂಬಿಸಲು ಪೂರ್ವಭಾವಿಯಾಗಿ ತಯಾರಿ ಮಾಡಿಕೊಂಡಿದ್ದರು ಎಂದು ಹೆಬ್ಬಾಳಕರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
Laxmi News 24×7