ವಿಷಕಾರಿ ರಾಸಾಯನಿಕ ಬಳಕೆ ನಿಲ್ಲಿಸುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ
ಹುಕ್ಕೇರಿ ಪಟ್ಟಣದ ಚೈನೀಸ್ ಫುಡ್ ಅಂಗಡಿಗಳಲ್ಲಿ ಟೆಸ್ಟಿಂಗ್ ಪೌಡರ್ ಹಾಗೂ ರಾಸಾಯನಿಕ ಬಣ್ಣಗಳ ಬಳಕೆಯ ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕೆಲವು ಪ್ರಮುಖ ಚೈನೀಸ್ ಫುಡ್ ಅಂಗಡಿಗಳಿಗೆ ಭೇಟಿ ನೀಡಿದ ಪದಾಧಿಕಾರಿಗಳು, ಆಹಾರದಲ್ಲಿ ವಿಷಕಾರಿ ರಾಸಾಯನಿಕ ಪದಾರ್ಥಗಳ ಬಳಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇಂತಹ ಪದಾರ್ಥಗಳನ್ನು ತಕ್ಷಣ ನಿಲ್ಲಿಸಬೇಕೆಂದು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಿದರು.
ಇದೇ ವೇಳೆ, ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಂಘಟನೆಯವರು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಅನಾರೋಗ್ಯಕರ ಪದಾರ್ಥಗಳನ್ನು ಬಳಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ತಾಲೂಕಿನ ಎಲ್ಲಾ ಚೈನೀಸ್ ಫುಡ್ ಅಂಗಡಿಗಳಿಗೆ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
“ಜನರ ಆರೋಗ್ಯದೊಂದಿಗೆ ಆಟವಾಡುವ ಯಾವುದೇ ಚಟುವಟಿಕೆ ಸಹಿಸಲಾಗುವುದಿಲ್ಲ” ಎಂದು ಸಂಘಟನೆಯ ಪದಾಧಿಕಾರಿಗಳು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ಎನ್. ಬಾಳೇಶಗೋಳ, ತಾಲೂಕ ಗೌರವಾಧ್ಯಕ್ಷ ರಮೇಶ್ ತಳವಾರ, ತಾಲೂಕ ಅಧ್ಯಕ್ಷ ಮಹಾಂತೇಶ ಬೇವಿನಕಟ್ಟಿ, ಉಪಾಧ್ಯಕ್ಷ ರಾಘವೇಂದ್ರ ಕರಾಯಿಗೋಳ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ, ಖಜಾಂಚಿ ಕಲ್ಲಪ್ಪ ಮಾಳಾಜ, ಮಹಮ್ಮದ್ ಅರೀಫ್ ಪಠಾಣ್ ಹಾಗೂ ನಿರಂಜನ್ ಶಿರೋರ ಉಪಸ್ಥಿತರಿದ್ದರು.
ಆಹಾರ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
Laxmi News 24×7