Breaking News

ಯುಪಿಎಸ್ಸಿ : ಗಿರಿ ಜಿಲ್ಲೆಗೆ ಮೂಡಿದ ಹೆಮ್ಮೆಯ ಗರಿ ಯುಪಿಎಸ್ಸಿ ಸಿವಿಲ್‌ ಸರ್ವೀಸ್ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆ

Spread the love

ಯಾದಗಿರಿ :ಯುಪಿಎಸ್ಸಿ (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮೀಶನ್‌) ನಡೆಸಿದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ (ಸಿವಿಲ್‌ ಸರ್ವೀಸ್‌) ಪರೀಕ್ಷೆಯ ಅಂತಿಮ ಫಲಿತಾಂಶ ಇಂದು ಶುಕ್ರವಾರ (ಮಾ.6) ಪ್ರಕಟಗೊಂಡಿದ್ದು, ಅಖಿಲ ಭಾರತ ಮಟ್ಟದಲ್ಲಿ ಯಾದಗಿರಿ ಜಿಲ್ಲೆಯ ನಾಲ್ವರು ತೇರ್ಗಡೆಯಾಗಿ, ಹೆಮ್ಮೆಗೆ ಪಾತ್ರರಾಗಿದ್ದಾರೆ.

ಯಾದಗಿರಿಯ ಸಂದೀಪ್ ಬಾಡದ್‌ ರಾಜ್ಯದಲ್ಲಿ 2ನೇ ಹಾಗೂ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್‌, ವೈದ್ಯೆ ಡಾ. ನಿವೇದಿತಾ ಭಾವಿಮನಿ 469ನೇ ರ್ಯಾಂಕ್‌, ಬಸವರಾಜ್‌ ಜವಳಿ 664ನೇ ಹಾಗೂ ಚಂದ್ರಶೇಖರ 880ನೇ ರ್ಯಾಂಕ್‌ ಪಡೆಯುವ ಮೂಲಕ ಗಿರಿಜಿಲ್ಲೆಗೆ ಹೆಮ್ಮೆಯ ಗರಿ ಮೂಡಿಸಿದ್ದಾರೆ.

1. ಯಾದಗಿರಿಯ ಸಂದೀಪ್ ಬಾಡದ್‌ : 82ನೇ ರ್ಯಾಂಕ್‌
ಯಾದಗಿರಿ ನಗರದ ಕಿರಾಣಿ ವ್ಯಾಪಾರಿ ಬಸವರಾಜ್ ಬಾಡದ್ ಅವರ ದ್ವಿತೀಯ ಪುತ್ರ ಸಂದೀಪ್ ಬಾಡದ್, ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಪರೀಕ್ಷೆಯಲ್ಲಿ 82ನೇ ರ್ಯಾಂಕ್‌ ಪಡೆದಿದ್ದಾರೆ, ಯಾದಗಿರಿಯ ಚಿರಂಜೀವಿ, ನ್ಯೂ ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಶಹಾಪುರದ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿವರೆಗೂ ಅಧ್ಯಯನ, ಬೆಂಗಳೂರಿನ ಎಐಟಿ (ಅಂಬೇಡ್ಕರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ )ಯಲ್ಲಿ ಇಂಜಿನೀಯರಿಂಗ್ ಪದವಿ ಪೂರೈಸಿ, ಸಾಫ್ಟವೇರ್‌ ಕಂಪನಿಯಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ದೆಹಲಿಯಲ್ಲಿ ಐಎಎಸ್ ಪರೀಕ್ಷೆಯ ತರಬೇತಿ ಪಡೆದು 2025ನೇ ಸಾಲಿನಲ್ಲಿ ಅಖಿಲ ಭಾರತ ಮಟ್ಟದಲ್ಲಿ 82ನೇ ರ್ಯಾಂಕ್ ಪಡೆದಿದ್ದಾರೆ. ರಾಜ್ಯಮಟ್ಟದಲ್ಲಿ ಇವರು 2ನೇ ಟಾಪರ್‌.

2. ಯಾದಗಿರಿಯ ಡಾ. ನಿವೇದಿತಾ ಭಾವಿಮನಿ : 469ನೇ ರಾಂಕ್
ಯಾದಗಿರಿ ನಗರದ ಆರೋಗ್ಯ ಇಲಾಖೆಯ ನಿವೃತ್ತ ಸಿಬ್ಬಂದಿ ಚಂದಪ್ಪ ಬಾವಿಮನಿ ಹಾಗೂ ವರ್ಕನಳ್ಳಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಬಾವಿಮನಿ ದಂಪತಿ ಪುತ್ರಿ ಡಾ. ನಿವೇದಿತಾ, ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 469ನೇ ರಾಂಕ್ ಪಡೆದಿದ್ದಾರೆ. ಯಾದಗಿರಿ ನಗರದ ದೋಕಾ ಜೈನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಆರ್‌. ವಿ. ವಿದ್ಯಾಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ. ಕಲ್ಬುರ್ಗಿ ಎಸ್ಬಿಆರ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ), ಬೆಂಗಳೂರಿನ ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂ.ಬಿ.ಬಿ.ಎಸ್. ಪದವಿ ಪೂರ್ಣಗೊಳಿಸಿದ್ದು. 2ನೇ ಪ್ರಯತ್ನದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 469ನೇ ರಾಂಕ್ ಪಡೆದು ಕೀರ್ತಿ ತಂದಿದ್ದಾರೆ.

3. ಶಹಾಪುರದ ಬಸವರಾಜ್ ಜವಳಿ : 664ನೇ ರ್ಯಾಂಕ್.
ಯಾದಗಿರಿ ಜಿಲ್ಲೆಯ ಶಹಾಪುರದ ನಗರದ ಬಸವರಾಜ್ ಜವಳಿ ಅಖಿಲ ಭಾರತ ಮಟ್ಟದಲ್ಲಿ 664ನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ.
ಶಹಾಪುರ ಪಟ್ಟಣದ ಉದ್ಯಮಿಗಳಾದ ವಿಶ್ವನಾಥ್- ಗಿರಿಜಾ ಜವಳಿ ದಂಪತಿಯ ಪುತ್ರ ಬಸವರಾಜ್‌, ಒಂದರಿಂದ ಏಳನೇ ತರಗತಿವರೆಗೆ ಕನ್ನಡದಲ್ಲಿ ವ್ಯಾಸಂಗ ಮಾಡಿದ್ದವರು ಅನ್ನೋದು ಹೆಮ್ಮೆಯ ವಿಚಾರ. ನಂತರದಲ್ಲಿ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ಸಿವಿಲ್ ಇಂಜಿನೀಯರಿಂಗ್ ನಲ್ಲಿ ಪದವೀಧರರು.

4. ವನದುರ್ಗದ ಚಂದ್ರಶೇಖರ್ : 880ನೇ ರ್ಯಾಂಕ್‌
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚೆನ್ನೂರು ಗ್ರಾಮದ ಕೃಷಿಕ ದಂಪತಿ ಪುತ್ರ ಚಂದ್ರಶೇಖರ್ ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಪರೀಕ್ಷೆಯಲ್ಲಿ 880ನೇ ರ್ಯಾಂಕ್‌ ಪಡೆದಿದ್ದಾರೆ. ಚೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣ, ವನದುರ್ಗದಲ್ಲಿ ಪ್ರೌಢ ಶಿಕ್ಷಣ, ಕಲ್ಬುರ್ಗಿಯ ಶ್ರೀ ಗುರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗ, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನೀಯರಿಂಗ್ ಪದವಿ ಪೂರೈಸಿದ್ದಾರೆ. ಮೂರು ಸಲ ಸಂದರ್ಶನಕ್ಕೆ ಆಯ್ಕೆಯಾಗಿ, ಈಗ ನಾಲ್ಕನೇ ಬಾರಿಗೆ 880 ರ್ಯಾಂಕ್‌ ಪಡೆಯುವ ಮೂಲಕ ಯಶಸ್ವಿಯಾಗಿದ್ದಾರೆ. ಇವರ ಹಿರಿಯ ಸಹೋದರ ತೋಟಗಾರಿಕೆ ಇಲಾಖೆಯ ವಿಜ್ಞಾನಿ ಡಾ. ದೇವೇಂದ್ರಪ್ಪ.


Spread the love

About Laxminews 24x7

Check Also

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ! ಸ್ಥಳೀಯಾಡಳಿತ, ಪೊಲೀಸರೂ ಮೌನ

Spread the loveಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ