ಬೆಂಗಳೂರು: ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣದಲ್ಲಿ ನಾಲ್ಕು ತಿಂಗಳ ಹಿಂದೆ ಬಂಧಿತರಾಗಿದ್ದ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ನಾಲ್ಕು ತಿಂಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೀರೇಂದ್ರ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಕಾನೂನು ಬಾಹಿರವಾಗಿ ಕ್ಯಾಸಿನೋದಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿರುವ ಆರೋಪದಡಿ ಕಳೆದ ಆಗಸ್ಟ್ 23ರಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಸಿಕ್ಕಿಂ ರಾಜಧಾನಿ ಗ್ಯಾಂಗ್ ಟಕ್ನಲ್ಲಿ ಕಾಂಗ್ರೆಸ್ ಶಾಸಕರನ್ನು ಬಂಧಿಸಿದ್ದರು.
ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆಯ 6, ಬೆಂಗಳೂರಿನ 10, ಗೋವಾದ 8, ಜೋಧ್ಪುರದ 3, ಮುಂಬೈನ 2, ಹುಬ್ಬಳ್ಳಿಯ 1 ಸೇರಿದಂತೆ 31 ಕಡೆಗಳಲ್ಲಿ ಕೆ.ಸಿ. ವೀರೇಂದ್ರಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಸುಮಾರು 1 ಕೋಟಿ ರೂ. ವಿದೇಶಿ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು, 10 ಕೆ.ಜಿ ಬೆಳ್ಳಿಯ ವಸ್ತುಗಳು ಸೇರಿದಂತೆ 12 ಕೋಟಿ ರೂಪಾಯಿ ನಗದು ಹಾಗೂ 4 ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರಡಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, 17 ಬ್ಯಾಂಕ್ ಖಾತೆಗಳು, 2 ಬ್ಯಾಂಕ್ ಲಾಕರ್ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಮತ್ತು ವೀರೇಂದ್ರ ಅವರ ಸಹೋದರ ಕೆ.ಸಿ ನಾಗರಾಜ್, ಅವರ ಮಗ ಪೃಥ್ವಿ. ಎನ್ ರಾಜ್ ಅವರಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.
ತನಿಖೆ ವೇಳೆ ಎಂಜಿಎಂ ಕ್ಯಾಸಿನೊ, ಮೆಟ್ರೋಪಾಲಿಟನ್ ಕ್ಯಾಸಿನೊ, ಬೆಲ್ಲಾಜಿಯೊ ಕ್ಯಾಸಿನೊ, ಮರೀನಾ ಕ್ಯಾಸಿನೊ, ಕ್ಯಾಸಿನೊ ಜ್ಯುವೆಲ್ ಹೀಗೆ ಅಂತಾರಾಷ್ಟ್ರೀಯ ಕ್ಯಾಸಿನೊ ಸದಸ್ಯತ್ವ, ವಿವಿಧ ಬ್ಯಾಂಕ್ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳು, ತಾಜ್, ಹಯಾತ್, ಲೀಲಾ ಐಷಾರಾಮಿ ಆತಿಥ್ಯ ಸದಸ್ಯತ್ವ ಕಾರ್ಡ್ಗಳನ್ನು ಪಪ್ಪಿ ಹೊಂದಿರುವುದು ದಾಳಿ ವೇಳೆ ಬಯಲಾಗಿತ್ತು. ಕಳೆದ ಎರಡು ತಿಂಗಳ ಹಿಂದೆ ಪಪ್ಪಿ ವಿರುದ್ಧ ಇ.ಡಿ. ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು.
Laxmi News 24×7