ಬೆಂಗಳೂರು: ರಾಜ್ಯದಲ್ಲಿ ಪವರ್ ಫೈಟ್ ಮತ್ತೆ ಚುರುಕಾದಂತಿದೆ. ಈ ಮಧ್ಯೆ ಮಾಜಿ ಸಚಿವ ಕೆ.ಎನ್.ರಾಜಣ್ಣರ ನಡೆ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಎರಡು ಬಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದ ಕೆ.ಎನ್.ರಾಜಣ್ಣ, ಮಂಗಳವಾರ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಎರಡು ದಿನಗಳ ಹಿಂದೆ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ಬಾರಿ ಪರಸ್ಪರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ರಾಜಕೀಯವಾಗಿ ವೈರಿಗಳಾಗಿದ್ದ ಉಭಯ ನಾಯಕರ ಭೇಟಿ ಹುಬ್ಬೇರಿಸುವಂತೆ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಕೆ.ಎನ್.ರಾಜಣ್ಣರನ್ನು ಭೇಟಿ ಮಾಡುವ ಮೂಲಕ ಡಿಕೆಶಿ ಅವರ ವಿಶ್ವಾಸ ಗಳಿಸುವ ಯತ್ನಿಸಿದ್ದಾರೆ ಎಂದೇ ಬಿಂಬಿತವಾಗಿತ್ತು. ಭೇಟಿ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮನ್ನು ಬೆಂಬಲಿಸುವಂತೆ ರಾಜಣ್ಣರ ಬಳಿ ಮನವಿ ಮಾಡಿದ್ದರು ಎಂದು ಹೇಳಲಾಗುತ್ತಿತ್ತು.
ಡಿ.ಕೆ.ಶಿವಕುಮಾರ್-ಕೆ.ಎನ್.ರಾಜಣ್ಣರ ಪರಸ್ಪರ ಭೇಟಿ ಮಧ್ಯೆ ಕೆ.ಎನ್.ರಾಜಣ್ಣ ಮತಗಳ್ಳತನ ಸಂಬಂಧ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ರಾಹುಲ್ ಗಾಂದಿಗೆ ಬರೆದ ಪತ್ರ ಮುನ್ನೆಲೆಗೆ ಬಂದಿದೆ. ನವೆಂಬರ್ 17ರಂದು ಬರೆದ ಪತ್ರದಲ್ಲಿ ಕೆ.ಎನ್.ರಾಜಣ್ಣ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಈ ಪತ್ರ ಈಗ ಬಹಿರಂಗವಾಗಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಇದರ ಬೆನ್ನಲ್ಲೇ ಇದೀಗ ಕೆ.ಎನ್.ರಾಜಣ್ಣ ಅವರು ಮಂಗಳವಾರ ಸಿಎಂ ಸಿದ್ದರಾಮಯ್ಯರನ್ನು ಸರ್ಕಾರಿ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ತುಸು ಹೊತ್ತು ಸಮಾಲೋಚನೆ ನಡೆಸಿದ್ದಾರೆ. ಉಭಯ ನಾಯಕರ ಈ ಭೇಟಿ ಪವರ್ ಫೈಟ್ ಅಧ್ಯಾಯಕ್ಕೆ ಇನ್ನಷ್ಟು ತಿರುವುಗಳನ್ನು ನೀಡಿದೆ. ಸಿಎಂ ಸಿದ್ದರಾಮಯ್ಯ ಭೇಟಿ ವೇಳೆ ಕೆ.ಎನ್.ರಾಜಣ್ಣ ಇತ್ತೀಚೆಗೆ ಡಿಸಿಎಂ ಡಿಕೆಶಿ ಭೇಟಿ ಬಗ್ಗೆ ವಿವರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರ ನಡುವೆ ನಡೆದ ಸಮಾಲೋಚನೆ, ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸೋಮವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧ ಎಂದು ಹೇಳಿದ್ದರು.
ನಾಯಕತ್ವ ಗೊಂದಲವನ್ನು ಸ್ಥಳೀಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ, ಅವರು ಈ ಬಗ್ಗೆ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾನು ಬದ್ಧ. ನೀವು(ಮಾಧ್ಯಮದವರು) ಚರ್ಚೆ ಮಾಡುತ್ತಿದ್ದೀರಿ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯವೇನಿದೆ? ನಾನು ಸದನದಲ್ಲಿ ಸ್ಪಷ್ಟನೆ ನೀಡಿದ್ದೇನೆ, ಆದರೂ ಮತ್ತೆ ಯಾಕೆ ಚರ್ಚೆ? ಎಂದು ಪ್ರಶ್ನಿಸಿದ್ದರು
Laxmi News 24×7