ಬೆಂಗಳೂರು: ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನಡೆಸಲು ಉದ್ದೇಶಿಸಿರುವ ಪಥಸಂಚಲನಕ್ಕೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ನಿರ್ಧಾರವನ್ನು ನವೆಂಬರ್ 13ರಂದು ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ, ಆರ್ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ಕಲಬುರಗಿಯ ನ್ಯಾಯಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ವಾದ – ಪ್ರತಿವಾದ: ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, ”ಒಂದು ವಾರದೊಳಗೆ ಮನವಿ ಸಲ್ಲಿಸಿರುವ ಎಲ್ಲ ಸಂಘಟನೆಗಳಿಗೂ ಅನುಮತಿ ನೀಡಲಾಗುವುದು. ಯಾವ ದಿನ ಅವರಿಗೆ ಅವಕಾಶ ನೀಡಲಾಗುವುದು ಎಂಬುದನ್ನು ಲಿಖಿತವಾಗಿ ತಿಳಿಸಲಾಗುವುದು. ಅದಕ್ಕಾಗಿ ಒಂದು ವಾರ ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ”ನ್ಯಾಯಾಲಯದ ಸಲಹೆಯಂತೆ ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ನಡೆದ ಶಾಂತಿ ನಡೆಸಿದ್ದು, ಅರ್ಜಿದಾರರು ಸಭೆಯಲ್ಲಿ ಭಾಗಿಯಾಗಿ ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈ ಸಂಬಂಧ ಸರ್ಕಾರದ ನಿರ್ಧಾರ ತಿಳಿಸಬೇಕಿದೆ” ಎಂದು ಹೇಳಿದರು.
ಇದಕ್ಕೆ ಅರ್ಜಿದಾರರ ಪರ ವಕೀಲರು, ”ನವೆಂಬರ್ 13 ಅಥವಾ 16ರಂದು ಪಥಸಂಚಲನ ನಡೆಸಲು ಅನುಮತಿಸಿದರೆ ಅನುಕೂಲವಾಗುತ್ತದೆ. ಸಭೆ ನಡೆಸಲು ಕಲ್ಯಾಣ ಮಂಟಪವನ್ನು ಕಾಯ್ದಿರಿಸಲಾಗಿದ್ದು, ನಾವು ಕೇಳಿರುವ ಎರಡು ದಿನಗಳಂದು ಮಾತ್ರ ಮಂಟಪ ಬಳಕೆಗೆ ಲಭ್ಯವಿದೆ” ಎಂದು ಪೀಠಕ್ಕೆ ತಿಳಿಸಿದರು.
Laxmi News 24×7