ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್ ಮೈಂಡ್ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್ ಸಂಸದ ಹಾಗೂ ದಕ್ಷಿಣ ಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್” ಎಂದು ಬುಧವಾರ ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ತನಿಖೆ ಎದುರಿಸಲು ಸವಾಲು: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಪ್ರಕರಣಕ್ಕೂ ಕರ್ನಾಟಕ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಸೆಂಥಿಲ್ಗೂ ಯಾವುದೇ ಸಂಬಂಧವಿಲ್ಲದಿದ್ದರೆ ಅವರು ತನಿಖೆಯನ್ನು ಎದುರಿಸುವಂತೆ ರೆಡ್ಡಿ ಸವಾಲು ಹಾಕಿದ್ದಾರೆ.
ಮಾಸ್ಟರ್ ಮೈಂಡ್ ಸೆಂಥಿಲ್ ಎಂದು ರೆಡ್ಡಿ ಆರೋಪ: ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ಅವರು, “ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಕಳಂಕಿತಗೊಳಿಸುವ ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮ ಬಳಕೆದಾರರು, ಮುಖವಾಡ ಧರಿಸಿದ ವ್ಯಕ್ತಿ ಮತ್ತು ಈಗ ಸುಜಾತಾ ಭಟ್ ಅವರ ಪ್ರಚಾರದ ಹಿಂದಿನ ಮಾಸ್ಟರ್ ಮೈಂಡ್ ಸೆಂಥಿಲ್” ಎಂದು ಹೇಳಿಕೆ ನೀಡಿದ್ದಾರೆ.
ಸೆಂಥಿಲ್ ಪ್ರತಿಕ್ರಿಯೆ: ಜನಾರ್ದನ ರೆಡ್ಡಿ ಅವರ ಈ ಆರೋಪಕ್ಕೆ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಅವರು ನವದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ. ಅದೇನೆಂದರೆ, “ನಾನು ಬಳ್ಳಾರಿಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾಗ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಿಗೆ ಬೆಂಬಲವಾಗಿ ದಾಖಲೆಗಳನ್ನು ಒದಗಿಸಿದ್ದೆ. ಅದಕ್ಕಾಗಿ ಈಗ ರೆಡ್ಡಿ ಅವರು ನನ್ನ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಬಳಿಕ ಇದಕ್ಕೂ ಪ್ರತಿಕ್ರಿಯಿಸಿರುವ ರೆಡ್ಡಿ ಅವರು, “ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾರೆ. ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ನನ್ನ ವಿರುದ್ಧದ ಪ್ರಕರಣಗಳು ಪ್ರಾರಂಭವಾದಾಗ ಕಾಂಗ್ರೆಸ್ ಸಂಸದರು ಸಹಾಯಕ ಆಯುಕ್ತರಾಗಿ ಎಂದಿಗೂ ಸೇವೆ ಸಲ್ಲಿಸಿರಲಿಲ್ಲ” ಎಂಬ ಹೇಳಿಕೆ ನೀಡಿದ್ದಾರೆ.
ನನ್ನ ಮತ್ತು ಸೆಂಥಿಲ್ ನಡುವೆ ಯಾವುದೇ ಸಂಬಂಧವಿಲ್ಲ: ಮುಂದುವರೆದ ರೆಡ್ಡಿ ಅವರು, “ನನ್ನನ್ನು ಸೆಪ್ಟೆಂಬರ್ 5, 2011 ರಂದು ಬಂಧಿಸಲಾಯಿತು. ನನ್ನ ಬಂಧನದ ನಂತರ, ಅವರು (ಸೆಂಥಿಲ್) ಬಳ್ಳಾರಿಯಲ್ಲಿ ಕರ್ತವ್ಯಕ್ಕೆ ಸೇರಿದರು. ನನ್ನ ಮತ್ತು ಸೆಂಥಿಲ್ ನಡುವೆ ಯಾವುದೇ ಸಂಬಂಧವಿಲ್ಲ” ಎಂದು ಉತ್ತರಿಸಿದ್ದಾರೆ.
ಸೆಂಥಿಲ್ ಹಿಂದೂ ವಿರೋಧಿ ಎಂದು ರೆಡ್ಡಿ ಆರೋಪ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದೆ ಸೆಂಥಿಲ್ ಇದ್ದಾರೆ ಎಂದು ಆರೋಪಿಸಿರುವ ಜನಾರ್ದನ ರೆಡ್ಡಿ, “ಸಂಸದರು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ಧರ್ಮಸ್ಥಳದ ವಿರುದ್ಧ ಈಗಿರುವ ಇಡೀ ಪ್ರಕರಣವನ್ನು ಯೋಜಿಸಿದ್ದರು. ಸೆಂಥಿಲ್ ಹಿಂದೂ ವಿರೋಧಿ. ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡುವ ಸಮಯದಲ್ಲಿ, ಅವರು ಪೌರತ್ವ ತಿದ್ದುಪಡಿ ಕಾಯ್ದೆ, ಭಾರತೀಯ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ವಿರೋಧಿಸಿದ್ದರು” ಎಂದು ಆರೋಪಿಸಿದ್ದಾರೆ.