ದಾವಣಗೆರೆ : ಮುಂಬರುವ ಜಾತಿ ಗಣತಿಯ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಹಾಗೂ ಜಾತಿಯ ಕಾಲಂನಲ್ಲಿ ‘ಉಪಪಂಗಡ’ ಎಂದು ದಾಖಲಿಸುವಂತೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀರ್ಮಾನ ಕೈಗೊಂಡಿದೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಹೇಳಿದ್ದಾರೆ.
ಇಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳು ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯುತ್ತಿವೆ. ಜಾತಿಗಣತಿಯಲ್ಲಿ ಉಪಪಂಗಡವನ್ನು ನಮೂದಿಸದೇ ಇದ್ದರೆ ಈ ಸೌಲಭ್ಯ ಕೈ ತಪ್ಪುವ ಅಪಾಯವಿದೆ. ಹೀಗಾಗಿ, ಒಕ್ಕೂಟ ಈ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.
ಆದರೆ ಲಿಂಗಾಯಿತ ಎಂಬ ಕಾಲಂ ಇಲ್ಲ. ಹೀಗಾಗಿ ಅದರ ಬಗ್ಗೆ ಚಿಂತನೆ ನಡೆಯುತ್ತಿದೆ. ನಾವೆಲ್ಲರೂ ಒಂದಾಗಿ ಲಿಂಗಾಯತ ಎಂದು ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದ್ರೆ ಖಂಡಿತಾ ಕೊಡಲಿದೆ. ಅದನ್ನು ಮಾಡಬೇಕು ಎಂಬುದು ನಮ್ಮೆಲ್ಲರ ಆಸೆ ಎಂದು ತಿಳಿಸಿದ್ದಾರೆ.
ಬಸವ ಸಂಸ್ಕೃತಿಯಲ್ಲಿ ಗುರು ವಿರಕ್ತ ಎಂಬ ಭಾವನೆ ಇಲ್ಲವೇ ಇಲ್ಲ, ಅರಿವು ಯಾರಿಗಿದೆಯೋ ಅವರೆಲ್ಲರೂ ಬರಬೇಕು. ಬಸವಣ್ಣ ಸಕಲ ಜೀವಾತ್ಮರ ಲೇಸನ್ನು ಬಯಸಿದಂತವರು. ಆ ಭಾವನೆ ಕಾವಿತೊಟ್ಟ ಎಲ್ಲರಲ್ಲಿಯೂ ಇದೆ. ಗೃಹಸ್ಥರಲ್ಲಿಯೂ ಇದೆ. ಹಾಗಾಗಿ ಗುರು ವಿರಕ್ತ ಎಂಬ ಭೇದವಿಲ್ಲ ಎಂದು ಹೇಳಿದ್ದಾರೆ.
ಪಂಚಪೀಠಗಳೊಂದಿಗೆ ಮಾತನಾಡಲು ಸಿದ್ಧ : ಪಂಚಪೀಠಗಳೊಂದಿಗೆ ಮಾತನಾಡಲು ಸದಾ ನಾವು ಮುಕ್ತರಾಗಿದ್ದೇವೆ. ಬಸವ ಸಂಸ್ಕೃತಿ ಅಭಿಯಾನದ ಸಮರೋಪಕ್ಕೆ ಪಂಚಪೀಠಗಳು ಬಂದರೆ ಸಂತೋಷ ಪಡುತ್ತೇನೆ. ಆಹ್ವಾನ ಕೊಟ್ಟ ನಂತರ ಬಾರದೇ ಇದ್ದರೆ ಏನು ಮಾಡೋದು?. ನಮ್ಮ ತಪ್ಪಿನಿಂದ ಜಾತಿಗಣತಿಯಲ್ಲಿ ಲಿಂಗಾಯತರು ಕಡಿಮೆ ಸಂಖ್ಯೆ ಬಂದಿದ್ದರು. ಆ ತಪ್ಪು ಮತ್ತೆ ಆಗಬಾರದು ಎಂದು ಈ ಚರ್ಚೆ ನಡೆಯುತ್ತಿರುವುದು ಎಂದಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನ : ಬಸವ ಸಂಸ್ಕೃತಿ ಅಭಿಯಾನ 31 ಜಿಲ್ಲೆಗಳಲ್ಲಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 5 ರ ವರೆಗೆ ನಡೆಯುತ್ತದೆ. ಬಸವಣ್ಣನವರ ಜನ್ಮ ಸ್ಥಳ ಬಸವನಬಾಗೇವಾಡಿಯಲ್ಲಿ ಪ್ರಾರಂಭವಾಗಿ, ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಒಂದು ವರ್ಷ ಆಗಿದೆ. ಆದರೆ ಇದನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಆದ್ದರಿಂದ ಅದನ್ನು ತಿಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.
Laxmi News 24×7