ಬೆಂಗಳೂರು: ಪ್ಲಾಸ್ಟಿಕ್ ಕೈ ಚೀಲಗಳ ಬದಲು ಕರಗುವ “ಕಾಂಪೋಸ್ಟಬಲ್ ಕ್ಯಾರಿ ಬ್ಯಾಗ್” ಗಳ ಉತ್ಪಾದನೆಗೆ ಆದ್ಯತೆ ನೀಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಈ ವಿಷಯ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತು ಅರಣ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆಗಳಲ್ಲಿ “ಪ್ಲಾಸ್ಟಿಕ್ ಬ್ಯಾಗ್” ಎಂಬ ಪದದ ವ್ಯಾಖ್ಯಾನಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ನಿಬಂಧನೆಗಳ ಯಶಸ್ವಿ ಅನುಷ್ಠಾನ ಮತ್ತು ಎಲ್ಲ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳ ಬದಲಾಗಿ ಭೂಮಿಯಲ್ಲಿ ಸುಲಭವಾಗಿ ಕರಗುವ “ಕಾಂಪೋಸ್ಟಬಲ್ ಕ್ಯಾರಿ ಬ್ಯಾಗ್” ಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿಭಾಯಿಸಲು ಹಾಗೂ ಪ್ಲಾಸ್ಟಿಕ್ ನಿರ್ವಹಣೆಯ ಒಟ್ಟಾರೆ ಉದ್ದೇಶವನ್ನು ಸಾಧಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಕಾಂಪೋಸ್ಟ್‍ಬಲ್ ಕೈ ಚೀಲಗಳನ್ನು ಉತ್ಪಾದಿಸಲು ಉತ್ಪಾದಕರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪೋರ್ಟಲ್ನಲ್ಲಿ ನೋಂದಣಿ ಪತ್ರ ಪಡೆಯಬೇಕಾಗಿದೆ ಎಂದು ಹೇಳಿದರು.
ಹಾರಂಗಿ ಜಲಾಶಯದ ಕೆಳಭಾಗದಲ್ಲಿ ಕೊಡಗು ಜಿಲ್ಲೆಯ ಕುಶಾಲನಗರದ ಹುಲುಗುಂದ ಗ್ರಾಮದ ಬಳಿ ಕಮಾನು ಸೇತುವೆಯನ್ನು 36.50 ಕೋಟಿ ರೂ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಮತ್ತು ಹಾರಂಗಿ ಜಲಾಶಯದ ಎಡದಂಡೆ ಕಾಲುವೆಯ 1 ರಿಂದ 18 ರವರೆಗಿನ ವಿತರಣಾ ನಾಲೆಗಳನ್ನು 49.90 ಕೋಟಿ ರೂ ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
Laxmi News 24×7