ಬೆಂಗಳೂರು, ಜುಲೈ 7: ಅನ್ನಭಾಗ್ಯ (Anna Bhagya) ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದು. ಅನ್ನಭಾಗ್ಯ ಯೋಜನೆಗೆ 10 ಕೆಜಿ ಅಕ್ಕಿ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ಈಗ ಶಾಕ್ ಎದುರಾಗಿದೆ. ಮುಂದಿನ ತಿಂಗಳು ಅಕ್ಕಿ ಸಿಗುತ್ತದೆಯೋ ಇಲ್ಲವೋ ಎಂಬಾತಾಗಿದೆ. ಯಾಕೆಂದರೆ, ಇಂದಿನಿಂದ ಅನ್ನಭಾಗ್ಯ ಆಹಾರ ಧಾನ್ಯ ಸಾಗಾಟ ಬಂದ್ ಆಗಿದೆ. ಆಹಾರ ಧಾನ್ಯ ಸಾಗಾಣಿಕೆ ವೆಚ್ಚವನ್ನು ಸರ್ಕಾರ ಬಾಕಿ ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ.
15 ದಿನಗಳ ಗಡುವಿಗೂ ಸ್ಪಂದಿಸದ ಸರ್ಕಾರ
ಅನ್ನಭಾಗ್ಯ ಆಹಾರ ಧಾನ್ಯಗಳನ್ನು ಸಾಗಿಸುವ ಲಾರಿಗಳಿಗೆ ಸರ್ಕಾರ ನೀಡಬೇಕಾಗಿದ್ದ ಹಣವನ್ನು ಪಾವತಿಸಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರ ಸಂಘ 15 ದಿನ ಗಡುವು ನೀಡಿತ್ತು. ಆದಾಗ್ಯೂ ಸರ್ಕಾರ ಯಾವುದೇ ರೀತಿಯಲ್ಲೂ ಸ್ಪಂದಿಸಲಿಲ್ಲ. ಹೀಗಾಗಿ ಇಂದಿನಿಂದ ಅನ್ನಭಾಗ್ಯ ಆಹಾರ ಸಾಗಿಸುವ ಲಾರಿಗಳ ಸಂಚಾರ ಬಂದ್ ಮಾಡಲಾಗಿದೆ.
ಅನ್ನಭಾಗ್ಯಕ್ಕೆ ಸರ್ಕಾರವೇ ಕನ್ನ ಹಾಕುತ್ತಿದೆ: ವಿಜಯೇಂದ್ರ
ಈ ನಡುವೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಅನ್ನಭಾಗ್ಯದ ಯೋಜನೆಗೆ ಸರ್ಕಾರವೇ ಕನ್ನ ಹಾಕುತ್ತಿದೆ ಎಂದಿದ್ದಾರೆ. ಅಕ್ಕಿ ನೀಡುವ ಬದಲು ಇಂದಿರಾ ಕಿಟ್ ನೀಡಿ ಅನ್ನಭಾಗ್ಯ ದುಡ್ಡು ಉಳಿಸಲು ಹೊರಟಿದೆ ಎಂದಿದ್ದಾರೆ.
ವಿಜಯೇಂದ್ರಗೆ ಯತೀಂದ್ರ ತಿರುಗೇಟು
ಮತ್ತೊಂದೆಡೆ, ‘ರಸ್ತೆ ಬೇಕಾ ಅನ್ನಭಾಗ್ಯದ ಅಕ್ಕಿ ಬೇಕಾ’ ಎಂದು ಕೇಳಿದ್ದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ಬಿಜೆಪಿಗೆ ಅಸ್ತ್ರವಾಗಿದೆ. ಇದೇ ಹೇಳಿಕೆ ಮುಂದಿಟ್ಟು ವಾಗ್ದಾಳಿ ನಡೆಸಿರುವ ವಿಜಯೇಂದ್ರ, ಅಭಿವೃದ್ದಿಗೆ ಹಣವಿಲ್ಲ ಎಂದು ಗುಡುಗಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಕೊಟ್ಟೂ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದಿದ್ದಾರೆ.