ಚಿಕ್ಕೋಡಿ(ಬೆಳಗಾವಿ): “ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ ಬಿ.ಆರ್. ಪಾಟೀಲ್ ಹೇಳಿರುವುದು ಸುಳ್ಳಲ್ಲ” ಎಂದು ಹಿರಿಯ ಶಾಸಕ ರಾಜು ಕಾಗೆ ಸ್ವಪಕ್ಷ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಆರ್. ಪಾಟೀಲ್ ಆಡಿರುವ ಮಾತುಗಳು ಸುಳ್ಳಲ್ಲ. ಅವರ ಆಡಿಯೋ ವೈರಲ್ ವಿಚಾರಕ್ಕೆ ನನ್ನ ಬೆಂಬಲವಿದೆ” ಎಂದರು”ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ನನಗೆ 25 ಕೋಟಿ ರೂಪಾಯಿ ಕಾಮಗಾರಿ ಮಂಜೂರು ಮಾಡಲಾಗಿದೆ. ಇದರಲ್ಲಿ 12 ಕೋಟಿ ರೂಪಾಯಿ ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಇನ್ನು 13 ಕೋಟಿ ರೂಪಾಯಿ ಕಾಮಗಾರಿಯ ವರ್ಕ್ ಆರ್ಡರ್ ಸಿಕ್ಕಿಲ್ಲ. 72 ಸಮುದಾಯದ ಭವನಕ್ಕೆ ಅನುಮೋದನೆ ಸಿಕ್ಕಿಲ್ಲ. ಎರಡು ವರ್ಷ ಆಯ್ತು ಇನ್ನೂ ವರ್ಕ್ ಆರ್ಡರ್ ಬಂದಿಲ್ಲ.
ಇಲ್ಲಿ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ, ನನ್ನ ಮನಸ್ಸಿಗೆ ನೋವಾಗಿದೆ, ನನಗೆ ರಾಜೀನಾಮೆ ಕೊಡುವ ಮನಸ್ಥಿತಿ ಬಂದಿದೆ.
ನಾನು ಎರಡು ದಿನದಲ್ಲಿ ಹೋಗಿ ರಾಜೀನಾಮೆ ಕೊಟ್ಟರೂ ಯಾವುದೇ ಆಶ್ಚರ್ಯವಿಲ್ಲ. ಇಲ್ಲಿ ಯಾವುದೆ ಕೆಲಸ ಕಾರ್ಯಗಳಾಗುತ್ತಿಲ್ಲ, ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಶಾಸಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ವ್ಯವಸ್ಥೆ ಎಂಬುದು ಸಂಪೂರ್ಣ ಹದಗೆಟ್ಟು ಹೋಗಿದೆ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.”ನಾವು ಕಾಮಗಾರಿಯ ಭೂಮಿ ಪೂಜೆ ಮಾಡಿ ಎರಡು ವರ್ಷ ಆಗಿದೆ. ಸ್ಥಳೀಯ ಇಂಜಿನಿಯರಗಳು ಯಾವುದೇ ಕಾರ್ಯವನ್ನು ಮಾಡುತ್ತಿಲ್ಲ. ಗುತ್ತಿಗೆಯಲ್ಲಿ ಹಲವು ಲೋಪಗಳು ಕಂಡು ಬರುತ್ತಿವೆ.
ಆದರೂ ಅಧಿಕಾರಿಗಳು ಏನು ಮಾಡುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಟೆಂಡರ್ ಪಡೆದವರನ್ನು ಅಧಿಕಾರಿಗಳು ಏನು ಕೇಳುತ್ತಿಲ್ಲ. ಇದರಿಂದ ವ್ಯವಸ್ಥೆ ಎಲ್ಲವೂ ಕೆಟ್ಟಿದೆ, ಸಮಕ್ಕೆ ಸರಿಯಾಗಿ ಯಾವುದೇ ಕಾರ್ಯಗಳು ಆಗುತ್ತಿಲ್ಲ” ಎಂದು ಆಡಳಿತಕ್ಕೆ ಚಾಟಿ ಬೀಸಿದರು.
Laxmi News 24×7