ಸವದತ್ತಿ: ವರ್ಷದ 12 ತಿಂಗಳೂ ಭಕ್ತರು, ವ್ಯಾಪಾರಿಗಳಿಂದ ಗಿಜುಗುಡುತ್ತಿದ್ದ ತಾಲೂಕಿನ ಸುಕ್ಷೇತ್ರ ಯಲ್ಲಮ್ಮ ದೇವಿ ಸನ್ನಿಧಿಗೆ ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಮಂಗಳವಾರ ಮತ್ತು ಶುಕ್ರವಾರ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಇದರಿಂದ ತಾಲೂಕಿಗೆ ಅಲ್ಪ ಪ್ರಮಾಣದಲ್ಲಿದ್ದ ಕೋವಿಡ್ ಸೋಂಕು ಹರಡುವ ಸಾಧ್ಯತೆಗಳಿವೆ. ಈಗಾಗಲೇ ಸರಕಾರದ ಆದೇಶದನ್ವಯ ರಾಜ್ಯದ
ಬಹುತೇಕ ದೇವಸ್ಥಾನಗಳಲ್ಲಿ ಸಾರ್ವಜನಿಕ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಯಲ್ಲಮ್ಮ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿಂದ ಸರಕಾರ ಮತ್ತು ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ದೇವಸ್ಥಾನವನ್ನು ಜೂ.30ರ ವರೆಗೆ ತೆರೆಯದಂತೆ ಆದೇಶಿಸಿದ್ದರು. ಈಗ ಈ ಆದೇಶವನ್ನು ಜುಲೈ 31ರ ವರೆಗೆ ಮುಂದುವರೆಸಲಾಗಿದೆ.
ಸದ್ಯ ಸಾರ್ವಜನಿಕರ ದರ್ಶನ ನಿಷೇಧಿ ಸಿದ್ದು, ಪೂಜಾ ವಿಧಿ- ವಿಧಾನಗಳು ನಿತ್ಯದಂತೆ ನಡೆದಿವೆ.
ಕೋವಿಡ್‌ನಿಂದ ಆರ್ಥಿಕ ಸಂಕಷ್ಟ ಅನುಭವಿಸಿದ ಸುತ್ತಲಿನ ಗ್ರಾಮಗಳ ಚಿಕ್ಕ ವ್ಯಾಪಾರಸ್ಥರು ಭಕ್ತರ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಬರುವ ಭಕ್ತಾದಿಗಳಿಗೆ ಪೂಜಾ ಸಾಮಗ್ರಿ, ಮಧ್ಯಾಹ್ನದ ಊಟ ಮತ್ತು ಚಹ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಗೆ ಸಣ್ಣ ಪುಟ್ಟ ವ್ಯಾಪಾರಸ್ಥರು ದೇವಸ್ಥಾನದತ್ತ ಮುಖ ಮಾಡಿದ್ದಾರೆ. ಜೋಗುತಿಯರು ಭಕ್ತರಿಂದ ಪಡ್ಡಲಗಿ ತುಂಬಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಸೋಂಕಿನ ಹರಡದಂತೆ ಸರಕಾರ ಎಷ್ಟೆ ಕ್ರಮ ಕೈಗೊಂಡರೂ ಭಕ್ತರಾಗಲಿ, ವ್ಯಾಪಾರಸ್ಥರಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಸೋಂಕು ತೀವ್ರತೆ ಪಡೆಯುವ ಸಂಭವಗಳನ್ನು ತಳ್ಳಿ ಹಾಕುವಂತಿಲ್ಲ. ದೇವಸ್ಥಾನದ ಸುತ್ತಲಿನ ಗ್ರಾಪಂಗಳಿಂದ ಗ್ರಾಮಸ್ಥರಿಗೆ ಮತ್ತು ವ್ಯಾಪಾರಸ್ಥರಿಗೆ ಗುಡ್ಡಕ್ಕೆ ಹೋಗದಂತೆ, ವ್ಯಾಪಾರ ನಡೆಸದಂತೆ ಪ್ರಚಾರ ನಡೆಸಿ
ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಲಾಗುತ್ತಿದೆ. ಸರಕಾರದ ಆದೇಶವಿದ್ದರೂ ಸಹ ದೇವಸ್ಥಾನಕ್ಕೆ ಭಕ್ತಾದಿಗಳ ಆಗಮನ ನಿಂತಿಲ್ಲ. ಪೊಲೀಸ್ ಇಲಾಖೆಯಿಂದ ಭಕ್ತರಿಗೆ, ಜೋಗುತಿಯರಿಗೆ ಮತ್ತು ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡಿ ಮರಳಿ ಕಳುಹಿಸುವ ಕಾರ್ಯ ನಡೆದಿದೆ.
ಸಾರ್ವಜನಿಕ ದರ್ಶನ ನಿಷೇಧವಿದ್ದರೂ ಭಕ್ತರು ಯಲ್ಲಮ್ಮನ ಗುಡ್ಡಕ್ಕೆ ಬರುತ್ತಿದ್ದಾರೆ. ಸಿಬ್ಬಂದಿಗಳಿಂದ ತಿಳಿವಳಿಕೆ ನೀಡಿ ಮರಳಿ ಕಳಿಸಲಾಗುತ್ತಿದೆ. ಸರಕಾರದ ಆದೇಶದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ