ಕೋಲಾರ: ಜಿಲ್ಲೆಯಲ್ಲಿ ಗುರುವಾರ ವೈದ್ಯೆ ಸೇರಿದಂತೆ 10 ಮಂದಿಗೆ ಕೊರೊನಾ ಸೋಂಕು ಹರಡಿದ್ದು, ಸೋಂಕಿತರ ಸಂಖ್ಯೆ 86ಕ್ಕೆ ಏರಿದೆ.
ಕೋಲಾರ ತಾಲ್ಲೂಕು ಒಂದರಲ್ಲೇ 5 ಮಂದಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಜಿಲ್ಲಾ ಕೇಂದ್ರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕೋವಿಡ್-19 ವಾರ್ಡ್‌ನ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದೆ.
ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಕಾರಣಕ್ಕೆ ಈ ಇಬ್ಬರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಾಲಪ್ಪ ಆಸ್ಪತ್ರೆಯಲ್ಲೇ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ವೈದ್ಯಕೀಯ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.
ಕೋಲಾರ ತಾಲ್ಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದ 48 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇವರು ವಿಷಮ ಶೀತ ಜ್ವರದಿಂದ (ಐಎಲ್‌ಐ) ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಬಡಾವಣೆಯ 53 ವರ್ಷದ ಪುರುಷರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಉಸಿರಾಟ ಸಮಸ್ಯೆಯ ಕಾರಣಕ್ಕೆ ಇವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕೋಲಾರದ 35 ವರ್ಷದ ಪುರುಷರೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಪ್ರಾಥಮಿಕ ಸಂಪರ್ಕ: ಬಂಗಾರಪೇಟೆಯ ಗೌತಮ ನಗರದಲ್ಲಿ ಜೂನ್ 27ರಂದು ಪತ್ತೆಯಾಗಿದ್ದ ಕೆಜಿಎಫ್‌ನ ಬೆಮಲ್ ಉದ್ಯೋಗಿಯಾದ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ ಮಗಳಿಗೆ ಇದೀಗ ಸೋಂಕು ತಗುಲಿದೆ. ಬೆಮಲ್ ಉದ್ಯೋಗಿಯು ಇತ್ತೀಚೆಗೆ ತಮಿಳುನಾಡಿಗೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಸೋಂಕು ಹರಡಿತ್ತು. ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಪತ್ನಿ ಮತ್ತು ಮಗಳನ್ನು ಕ್ವಾರಂಟೈನ್ ಮಾಡಲಾಗಿತ್ತು.
ಬಂಗಾರಪೇಟೆ ಪಟ್ಟಣದ ಮಹಿಳೆಯೊಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ಇವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯೆಗೆ ಸೋಂಕು: ಮಾಲೂರು ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯೆಗೆ ಸೋಂಕು ಹರಡಿದೆ. ವೈದ್ಯರಾಗಿರುವ ಇವರ ಪತಿಗೆ ಕೊರೊನಾ ಸೋಂಕು ಇರುವುದು ನಾಲ್ಕೈದು ದಿನಗಳ ಹಿಂದೆ ಗೊತ್ತಾಗಿತ್ತು. ಅವರಿಂದ ಇದೀಗ ಪತ್ನಿಗೂ ಸೋಂಕು ಹರಡಿದೆ. ಮುಳಬಾಗಿಲು ನಗರದ ಕುರುಬರಪೇಟೆ ಬಡಾವಣೆಯ 63 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.Ψ